Taliban
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳ ಪ್ರಕಾರ ಇನ್ಮುಂದೆ ಹೆಣ್ಣು ಮಕ್ಕಳಿಗೆ ಹೊಡೆಯುವುದು ಅಪರಾಧವಲ್ಲ. ಅಷ್ಟೇ ಅಲ್ಲದೆ ಹೊಸ 90 ಪುಟಗಳ ಕಟ್ಟುನಿಟ್ಟಾದ ಕಾನೂನಿನ ಮೂಲಕ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ಹತ್ತಿಕ್ಕಲು ಮುಂದಾಗಿದೆ. ತಾಲಿಬಾನ್ ಜಾರಿಗೊಳಿಸಿರುವ ಪ್ರಮುಖ ಕಾನೂನು ಮತ್ತು ನಿರ್ಬಂಧಗಳ ಪಟ್ಟಿ ಈ ಕೆಳಗಿನಂತಿದೆ…
ಮಹಿಳೆಯರ ಮೇಲಿನ ನಿಯಂತ್ರಣಗಳು:
- ಮನೆಯಲ್ಲಿ ದೌರ್ಜನ್ಯ: ಹೊಸ ಕಾನೂನಿನ ಮೂಲಕ ಗಂಡಂದಿರು ತಮ್ಮ ಪತ್ನಿಯರು ಮತ್ತು ಮಕ್ಕಳ ಮೇಲೆ ದೈಹಿಕ ಹಲ್ಲೆ ನಡೆಸಲು ಅನುಮತಿ ನೀಡಲಾಗಿದೆ. ಹಲ್ಲೆ ಮಾಡಿದಾಗ ಮೂಳೆ ಮುರಿಯದಿದ್ದರೆ ಅಥವಾ ಗಾಯವಾಗದಿದ್ದರೆ ಅದು ಅಪರಾಧವಲ್ಲ ಎಂದು ಪರಿಗಣಿಸಲಾಗುತ್ತದೆ.
- ಸಂಚಾರ ನಿರ್ಬಂಧ: ಪತಿಯ ಅನುಮತಿಯಿಲ್ಲದೆ ಸಂಬಂಧಿಕರ ಮನೆಗೆ ಹೋಗುವ ಮಹಿಳೆಗೆ 3 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.
- ಧ್ವನಿಗೆ ನಿರ್ಬಂಧ: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಜೋರಾಗಿ ಮಾತನಾಡುವಂತಿಲ್ಲ ಅಥವಾ ಹಾಡುವಂತಿಲ್ಲ ಎಂದು ತಿಳಿಸಲಾಗಿದೆ. ಒಂದು ವೇಳೆ ಹಾಡಿದ್ರೆ ಅಥವಾ ಮಾತನಾಡಿದ್ರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.
ಸಾಮಾಜಿಕ ತಾರತಮ್ಯ:
- ಉನ್ನತ ವರ್ಗ: ಧಾರ್ಮಿಕ ವಿದ್ವಾಂಸರು ಮತ್ತು ಗಣ್ಯರು ತಪ್ಪು ಮಾಡಿದರೆ ಕೇವಲ ಸಲಹೆ ಅಥವಾ ಸಮನ್ಸ್ ನೀಡಿ ಬಿಡಲಾಗುತ್ತದೆ. ಅಂದರೆ ಯಾವುದೇ ಕಠಿಣ ಕ್ರಮ ಕೈಗೊಳ್ಳುವುದಿಲ್ಲ.
- ಕೆಳ ವರ್ಗ: ಸಾಮಾನ್ಯ ಜನರು ಅಥವಾ “ಕೆಳ ವರ್ಗದ” ಜನರು ಅದೇ ತಪ್ಪನ್ನು ಮಾಡಿದರೆ ಕಠಿಣ ದೈಹಿಕ ಶಿಕ್ಷೆ ಅಥವಾ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
- ಗುಲಾಮಗಿರಿ: ಈ ಕಾನೂನು ‘ಗುಲಾಮ’ ಎಂಬ ಪದವನ್ನು ಅಧಿಕೃತವಾಗಿ ಬಳಸುವ ಮೂಲಕ ಗುಲಾಮಗಿರಿಯನ್ನು ಕಾನೂನುಬದ್ಧಗೊಳಿಸಿದೆ.
ನ್ಯಾಯ ಸಿಗುವುದು ಕಷ್ಟ:
- ಒಬ್ಬ ಮಹಿಳೆ ದೌರ್ಜನ್ಯದ ಬಗ್ಗೆ ದೂರು ನೀಡಬೇಕಾದರೆ, ಅವಳು ತನ್ನ ಪುರುಷ ಪಾಲಕನ ಜೊತೆಯಲ್ಲೇ ನ್ಯಾಯಾಲಯಕ್ಕೆ ಬರಬೇಕು.
- ಒಂದು ವೇಳೆ ಪತಿ ದೌರ್ಜನ್ಯ ಮಾಡಿದರೆ ಆತನೊಂದಿಗೆ ನ್ಯಾಯಾಲಕ್ಕೆ ಬರಬೇಕಾದ ಅನಿವಾರ್ಯತೆ ಇರಲಿದೆ.
- ಹಳೆಯ ಮಹಿಳಾ ರಕ್ಷಣಾ ಕಾನೂನುಗಳನ್ನು (EVAW) ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ಇತರೆ ನಿರ್ಬಂಧಗಳು:
- ಶಿಕ್ಷಣ: ಹೆಣ್ಣುಮಕ್ಕಳಿಗೆ ಪ್ರೌಢಶಾಲೆ ಮತ್ತು ವಿಶ್ವವಿದ್ಯಾಲಯದ ಶಿಕ್ಷಣವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ಮಾಧ್ಯಮ: ಜೀವಂತ ಪ್ರಾಣಿ ಅಥವಾ ಮನುಷ್ಯರ ಚಿತ್ರಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸುವುದನ್ನು ನಿಷೇಧಿಸಲಾಗಿದೆ.
- ಉದ್ಯೋಗ: ಮಹಿಳೆಯರು ಎನ್‌ಜಿಒ (NGO) ಅಥವಾ ವಿಶ್ವಸಂಸ್ಥೆಯಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುವುದನ್ನು ನಿರ್ಬಂಧಿಸಲಾಗಿದೆ.
ಪುರುಷರ ಮೇಲಿನ ನಿರ್ಬಂಧಗಳು:
- ಗಡ್ಡ ಮತ್ತು ಕೇಶ ವಿನ್ಯಾಸ: ಪುರುಷರು ಕಡ್ಡಾಯವಾಗಿ ಗಡ್ಡ ಬೆಳೆಸಬೇಕು; ಗಡ್ಡವನ್ನು ಪೂರ್ತಿಯಾಗಿ ಕ್ಷೌರ ಮಾಡುವುದು ಅಥವಾ ಅತಿಯಾಗಿ ಟ್ರಿಮ್ ಮಾಡುವುದು ನಿಷೇಧಿಸಲಾಗಿದೆ. ಪಾಶ್ಚಿಮಾತ್ಯ ಶೈಲಿಯ ಕೇಶ ವಿನ್ಯಾಸಗಳಿಗೂ ನಿರ್ಬಂಧವಿದೆ.
- ಉಡುಪು: ಪುರುಷರು ಮೊಣಕಾಲಿಗಿಂತ ಮೇಲಿರುವ ಚಡ್ಡಿಯನ್ನು (Shorts) ಧರಿಸುವಂತಿಲ್ಲ. ಅಲ್ಲದೆ, ಕುತ್ತಿಗೆಗೆ ಟೈ (Necktie) ಧರಿಸುವುದನ್ನು ನಿಷೇಧಿಸಲಾಗಿದೆ.
- ನೋಟದ ಮೇಲೆ ನಿಯಂತ್ರಣ: ಪುರುಷರು ತಮಗೆ ಸಂಬಂಧವಿಲ್ಲದ ಮಹಿಳೆಯರ ಕಡೆಗೆ ನೋಡುವುದನ್ನು ಅಥವಾ ಅವರ ಹತ್ತಿರ ಹೋಗುವುದನ್ನು ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: ‘ವಂದೇ ಮಾತರಂ’ ಹಾಡುವ ಮುನ್ನ ಇದೆಲ್ಲಾ ನಿಮಗೆ ಗೊತ್ತಿರಲಿ!
- ಸಂಗೀತ ಮತ್ತು ನೃತ್ಯ: ಸಾರ್ವಜನಿಕವಾಗಿ ಅಥವಾ ವಾಹನಗಳಲ್ಲಿ ಸಂಗೀತ ಕೇಳುವುದು ಮತ್ತು ನೃತ್ಯ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ಆಟಗಳು: ಚೆಸ್ (Chess), ವಿಡಿಯೋ ಗೇಮ್‌ಗಳು ಮತ್ತು ಮಕ್ಕಳ ಸಾಂಪ್ರದಾಯಿಕ ಆಟಗಳನ್ನೂ (ಗೋಲಿ ಆಟ ಇತ್ಯಾದಿ) ಜೂಜಿನ ರೂಪಗಳೆಂದು ಪರಿಗಣಿಸಿ ನಿಷೇಧಿಸಲಾಗಿದೆ.
ಸಾರ್ವಜನಿಕ ನೈತಿಕತೆ ಮತ್ತು ಧರ್ಮ:
- ಪ್ರಾರ್ಥನೆ: ಸಾರ್ವಜನಿಕರು ನಿಗದಿತ ಸಮಯದಲ್ಲಿ ಕಡ್ಡಾಯವಾಗಿ ಪ್ರಾರ್ಥನೆಯಲ್ಲಿ (ನಮಾಜ್) ಪಾಲ್ಗೊಳ್ಳಬೇಕು.
- ವಾಹನ ಚಾಲಕರು ಪ್ರಾರ್ಥನೆಯ ಸಮಯದಲ್ಲಿ ವಾಹನ ನಿಲ್ಲಿಸಿ ನಮಾಜ್ ಮಾಡುವುದು ಕಡ್ಡಾಯ.
- ಆಚರಣೆಗಳು: ಇಸ್ಲಾಮೇತರ ಹಬ್ಬಗಳು ಅಥವಾ ಆಚರಣೆಗಳನ್ನು ಆಚರಿಸುವುದು ನಿಷೇಧ.
- ಮಾಧ್ಯಮ ನಿಯಂತ್ರಣ: ಮಾಧ್ಯಮಗಳು ಕಡ್ಡಾಯವಾಗಿ ಶರಿಯತ್ ಕಾನೂನಿನ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸಬೇಕು.
ಹೊಸ ಕ್ರಿಮಿನಲ್ ಕೋಡ್ (2026) ಅಡಿಯಲ್ಲಿ ವಿಶೇಷ ಬದಲಾವಣೆಗಳು:
- ನೆರೆಹೊರೆಯವರ ಮೇಲೆ ಕಣ್ಣು: ಹೊಸ ಕಾನೂನಿನ ಪ್ರಕಾರ, ಜನರು ತಮ್ಮ ನೆರೆಹೊರೆಯವರ ಚಟುವಟಿಕೆಗಳ ಬಗ್ಗೆ ತಾಲೀಬಾನ್‌ಗೆ ಮಾಹಿತಿ ನೀಡುವಂತೆ ಪ್ರಚೋದಿಸಲಾಗುತ್ತದೆ.
- ಸ್ಥಳಗಳ ನಾಶ: “ಅನೈತಿಕ” ಎಂದು ಕಂಡುಬರುವ ಸ್ಥಳಗಳನ್ನು (ಉದಾಹರಣೆಗೆ ಬ್ಯೂಟಿ ಸಲೂನ್‌ಗಳು, ಬಾರ್ಬರ್ ಶಾಪ್‌ಗಳು) ಯಾವುದೇ ಮುನ್ಸೂಚನೆ ಇಲ್ಲದೆ ನಾಶಪಡಿಸುವ ಅಥವಾ ಮುಚ್ಚುವ ಅಧಿಕಾರವನ್ನು ತಾಲೀಬಾನ್ ಪಡೆದಿದೆ.
ಈ ನಿರ್ಬಂಧಗಳನ್ನು ಮೀರುವವರಿಗೆ ಮೌಖಿಕ ಎಚ್ಚರಿಕೆ, ದಂಡ, ಆಸ್ತಿ ಮುಟ್ಟುಗೋಲು ಅಥವಾ 3 ದಿನಗಳವರೆಗೆ ಜೈಲು ಶಿಕ್ಷೆಯನ್ನು ಸ್ಥಳೀಯ ‘ನೈತಿಕ ಪೊಲೀಸ್’ ಅಧಿಕಾರಿಗಳು ನೀಡಬಹುದು ಎಂದು ತಾಲಿಬಾನ್ ತನ್ನ ಕಟ್ಟಪ್ಪಣೆಯಲ್ಲಿ ತಿಳಿಸಿದೆ.