Airtel
ಖಾಸಗಿ ವಲಯದ ಪ್ರಮುಖ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್‌ಟೆಲ್ (Airtel) ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾಗಿದ್ದ ಹಾಗೂ ಗ್ರಾಹಕರು ವ್ಯಾಪಕವಾಗಿ ಬಳಸುತ್ತಿದ್ದ 6 ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್ಗಳನ್ನು ಏರ್‌ಟೆಲ್ ತನ್ನ ಪೋರ್ಟ್‌ಫೋಲಿಯೋದಿಂದ ಅಧಿಕೃತವಾಗಿ ತೆಗೆದುಹಾಕಿದೆ.
ಕಂಪನಿಯು ತನ್ನ ಸರಾಸರಿ ಆದಾಯ (ARPU) ಹೆಚ್ಚಿಸಿಕೊಳ್ಳಲು ಮತ್ತು ಟೆಲಿಕಾಂ ದರ ಪರಿಷ್ಕರಣೆಯ ಭಾಗವಾಗಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗಿದೆ.
ರದ್ದಾದ 6 ಪ್ಲ್ಯಾನ್ ಯಾವುವು?
- ₹299 ಪ್ಲ್ಯಾನ್: (ದಿನಕ್ಕೆ 1.5GB ಡೇಟಾ, 28 ದಿನಗಳ ವ್ಯಾಲಿಡಿಟಿ)
- ₹319 ಪ್ಲ್ಯಾನ್: (ಕ್ಯಾಲೆಂಡರ್ ತಿಂಗಳ ಪೂರ್ಣ ವ್ಯಾಲಿಡಿಟಿ)
- ₹579 ಪ್ಲ್ಯಾನ್: (ದಿನಕ್ಕೆ 1.5GB ಡೇಟಾ, 56 ದಿನಗಳ ವ್ಯಾಲಿಡಿಟಿ)
- ₹619 ಪ್ಲ್ಯಾನ್: (ದಿನಕ್ಕೆ 2GB ಡೇಟಾ, 56 ದಿನಗಳ ವ್ಯಾಲಿಡಿಟಿ)
- ₹649 ಪ್ಲ್ಯಾನ್: (ಡೇಟಾ ಮತ್ತು OTT ಪ್ರಯೋಜನಗಳ ಬಂಡಲ್)
- ₹799 ಪ್ಲ್ಯಾನ್: (ದಿನಕ್ಕೆ 1.5GB ಡೇಟಾ, 77 ದಿನಗಳ ವ್ಯಾಲಿಡಿಟಿ)
ಈ ಮೇಲಿನ ಎಲ್ಲಾ ಪ್ಲ್ಯಾನ್ಗಳು ಏರ್‌ಟೆಲ್ ತನ್ನ ಸಕ್ರಿಯ ಪಟ್ಟಿಯಿಂದ ತೆಗೆದುಹಾಕಿದ್ದು, ಗ್ರಾಹಕರು ಇನ್ಮುಂದೆ ಈ ಮೊತ್ತಕ್ಕೆ ರೀಚಾರ್ಜ್ ಮಾಡಲು ಸಾಧ್ಯವಿರುವುದಿಲ್ಲ. ಇದರೊಂದಿಗೆ, ಮತ್ತೊಂದು ಜನಪ್ರಿಯ 84 ದಿನಗಳ ವ್ಯಾಲಿಡಿಟಿಯ ಪ್ಲ್ಯಾನ್ ಬೆಲೆಯನ್ನು ₹859 ರಿಂದ ₹899 ಕ್ಕೆ ಏರಿಕೆ ಮಾಡಲಾಗಿದ್ದು, ಅದ ರಲ್ಲಿದ್ದ ಉಚಿತ ರಿವಾರ್ಡ್ಸ್‌ಮಿನಿ (RewardsMini) ಪ್ರಯೋಜನವನ್ನೂ ಕಡಿತಗೊಳಿಸಲಾಗಿದೆ.
ಗ್ರಾಹಕರ ಜೇಬಿಗೆ ಕತ್ತರಿ: ಈಗಿರುವ ಪರ್ಯಾಯಗಳೇನು?
ಈ ಜನಪ್ರಿಯ ಪ್ಲ್ಯಾನ್ಗಳ ರದ್ದತಿಯಿಂದಾಗಿ ಗ್ರಾಹಕರು ಈಗ ಕಡ್ಡಾಯವಾಗಿ ಹೆಚ್ಚಿನ ಹಣ ನೀಡಿ ಬೇರೆ ಪ್ಲ್ಯಾನ್ಗಳನ್ನು ಆಯ್ದುಕೊಳ್ಳಬೇಕಾಗಿದೆ. ಇದು ನೇರವಾಗಿ ಶೇ. 16 ರಿಂದ 20 ರಷ್ಟು ಆರ್ಥಿಕ ಹೊರೆಯನ್ನು ಹೆಚ್ಚಿಸಲಿದೆ.
- ₹299 ರ ಬದಲಿಗೆ ₹349: ಮೊದಲು ₹299 ಕ್ಕೆ ಸಿಗುತ್ತಿದ್ದ ಪ್ರಯೋಜನ ಪಡೆಯಲು ಈಗ ₹349 ಪ್ಲ್ಯಾನ್ ಆರಿಸಬೇಕು. ಇದರಲ್ಲಿ ದಿನಕ್ಕೆ 2GB ಡೇಟಾ ಮತ್ತು ಅನ್‌ಲಿಮಿಟೆಡ್ 5G ಸಿಗಲಿದೆಯಾದರೂ, ಗ್ರಾಹಕರು ₹50 ಹೆಚ್ಚುವರಿ ನೀಡಬೇಕು.
- ₹319 ರ ಬದಲಿಗೆ ₹399: ಇಡೀ ತಿಂಗಳ ವ್ಯಾಲಿಡಿಟಿ ಬಯಸುವವರು ಈಗ ₹399 ರ ಪ್ಲ್ಯಾನ್ ಮೊರೆ ಹೋಗಬೇಕಾಗಿದೆ.
- ₹799 ರ ಬದಲಿಗೆ ₹899: ದೀರ್ಘಾವಧಿ ವ್ಯಾಲಿಡಿಟಿ ಹೊಂದಿದ್ದ ₹799 ಪ್ಲ್ಯಾನ್ ಜಾಗದಲ್ಲಿ ಈಗ ₹899 ಪ್ಲಾನ್ ಲಭ್ಯವಿದ್ದು, ಗ್ರಾಹಕರು ₹100 ರಷ್ಟು ಹೆಚ್ಚು ಹಣ ವ್ಯಯಿಸಬೇಕಾಗಿದೆ.
ಅಂದರೆ ನಿಮ್ಮ ಮೊಬೈಲ್‌ನಲ್ಲಿ ಪ್ರತಿದಿನ ಯೂಟ್ಯೂಬ್ ಅಥವಾ ಇನ್‌ಸ್ಟಾಗ್ರಾಮ್ ರೀಲ್ಸ್ ನೋಡಲು “ಡೈಲಿ ಡೇಟಾ” ಬೇಕು ಎಂದರೆ ನೀವು ₹349 ಕನಿಷ್ಠ ಪ್ಲ್ಯಾನ್ ರಿಚಾರ್ಜ್ ಮಾಡಿಸಲೇಬೇಕು. ಇನ್ನು ಕೇವಲ ಸಿಮ್ ಕಾರ್ಡ್ ಚಾಲ್ತಿಯಲ್ಲಿಡಲು ಹಾಗೂ ಯುಪಿಐ ಪಾವತಿಯಂತಹ ಸಣ್ಣ-ಪುಟ್ಟ ಅಗತ್ಯಗಳಿಗೆ ಒಟ್ಟು 2GB ಡೇಟಾ ಒಳಗೊಂಡಿರುವ ₹199 ರ ಪ್ಲ್ಯಾನ್ ಈಗಲೂ ಲಭ್ಯವಿದ್ದು, ಈ ಡೇಟಾ ಖಾಲಿಯಾದರೆ ಮಾತ್ರ ಹೆಚ್ಚುವರಿ ಡೇಟಾ ರೀಚಾರ್ಜ್ ಮಾಡಿಸಬೇಕಾಗುತ್ತದೆ.
ಏರ್‌ಟೆಲ್‌ನ ಈ ತಂತ್ರಕ್ಕೆ ಕಾರಣವೇನು?
ಟೆಲಿಕಾಂ ತಜ್ಞರ ಪ್ರಕಾರ, ಏರ್‌ಟೆಲ್ ಮುಖ್ಯವಾಗಿ ಗ್ರಾಹಕರನ್ನು ದಿನಕ್ಕೆ 1.5GB ಡೇಟಾ ಬಳಸುವ ಪ್ಲಾನ್‌ಗಳಿಂದ 2GB ಅಥವಾ ಅದಕ್ಕಿಂತ ಹೆಚ್ಚಿನ ಡೇಟಾ ಪ್ಲ್ಯಾನ್ಗಳತ್ತ ಸೆಳೆಯಲು ಈ ಕ್ರಮ ಕೈಗೊಂಡಿದೆ.
ಉಚಿತ ಅನ್‌ಲಿಮಿಟೆಡ್ 5G ಡೇಟಾ ಪ್ರಯೋಜನಗಳನ್ನು ಒದಗಿಸುವ ನೆಪದಲ್ಲಿ ಗ್ರಾಹಕರು ಹೆಚ್ಚಿನ ಬೆಲೆಯ ಪ್ರೀಮಿಯಂ ಪ್ಲ್ಯಾನ್ಗಳನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸುವುದು ಕಂಪನಿಯ ಮುಖ್ಯ ಉದ್ದೇಶವಾಗಿದೆ.
ಅಲ್ಲದೆ, ಮುಂಬರುವ ದಿನಗಳಲ್ಲಿ ಜಿಯೋ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳೂ ಸಹ ದರ ಏರಿಕೆ ಮಾಡುವ ಮುನ್ಸೂಚನೆ ಸಿಕ್ಕಿದ್ದು, ಅದಕ್ಕೆ ಪೂರಕವಾಗಿ ಏರ್‌ಟೆಲ್ ತನ್ನ ಪ್ಲ್ಯಾನ್ಗಳನ್ನು ರೀ-ಡಿಸೈನ್ ಮಾಡಿದೆ.
ಇದನ್ನೂ ಓದಿ: ಜೈಲಿನಲ್ಲೂ ಪ್ರಜ್ವಲ್ ‘ಲೀಲೆ’: ಫೋನ್‌ನಲ್ಲಿ 90ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ!
ಒಟ್ಟಾರೆಯಾಗಿ, ಬಜೆಟ್ ಬೆಲೆಯಲ್ಲಿ ರೀಚಾರ್ಜ್ ಮಾಡಿಸುತ್ತಿದ್ದ ಸಾಮಾನ್ಯ ಏರ್‌ಟೆಲ್ ಗ್ರಾಹಕರಿಗೆ ಈ ಹೊಸ ಬದಲಾವಣೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಜಿಯೋ ಕನ್ನಡ ನ್ಯೂಸ್ನ ವಾಟ್ಸ್ಆ್ಯಪ್ ಗ್ರೂಪ್ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.