ಯಾಸಿನ್ ಮಲಿಕ್-ಮುಶಾಲ್
ದೆಹಲಿಯ ತೀಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF) ಮುಖ್ಯಸ್ಥ ಯಾಸಿನ್ ಮಲಿಕ್, ಕಾನೂನು ಮತ್ತು ವೈಯಕ್ತಿಕ ಜೀವನದಲ್ಲಿ ಅತ್ಯಂತ ಆಘಾತಕಾರಿ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ.
1990ರ ದಶಕದ ಕಾಶ್ಮೀರಿ ಪಂಡಿತ್ ನರ್ಸ್ ಸರಳಾ ಭಟ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಗರದ ವಿಶೇಷ ಟಾಡಾ (TADA/POTA) ನ್ಯಾಯಾಲಯಕ್ಕೆ ತನ್ನ ವಕೀಲರ ಮೂಲಕ 25 ಪುಟಗಳ ಲಿಖಿತ ಅಫಿಡವಿಟ್ ಸಲ್ಲಿಸಿರುವ ಮಲಿಕ್, ತನಗೆ ಮರಣದಂಡನೆ ವಿಧಿಸುವಂತೆ ಕೋರಿದ್ದಾರೆ. ಹಾಗೆಯೇ ತನ್ನ ಪಾಕಿಸ್ತಾನಿ ಮೂಲದ ಪತ್ನಿ ಮುಶಾಲ್ ಹುಸೇನ್ ಮಲ್ಲಿಕ್ ಅವರಿಗೆ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದಾರೆ.
“ನನ್ನನ್ನು ಗಲ್ಲಿಗೇರಿಸಿ, ನಾನು ಕೇಸ್ ನಡೆಸಲ್ಲ”
ರಾಜ್ಯ ತನಿಖಾ ಸಂಸ್ಥೆ (SIA) ಇತ್ತೀಚೆಗೆ ದಾಖಲಿಸಿರುವ ದೋಷಾರೋಪ ಪಟ್ಟಿಗೆ ಪ್ರತಿಕ್ರಿಯೆಯಾಗಿ ಮಲಿಕ್ ಈ ಅಫಿಡವಿಟ್ ಸಲ್ಲಿಸಿದ್ದಾರೆ. 1990ರ ಏಪ್ರಿಲ್ನಲ್ಲಿ ಶ್ರೀನಗರದ ಮೆಡಿಕಲ್ ಇನ್ಸ್ಟಿಟ್ಯೂಟ್ನ ನರ್ಸ್ ಸರಳಾ ಭಟ್ ಅವರ ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ ಮಲಿಕ್ ಪ್ರಮುಖ ಆರೋಪಿಯಾಗಿದ್ದಾರೆ.
“ಈ ಪ್ರಕರಣದ ವಿಚಾರಣೆಯನ್ನು ನಾನು ಇನ್ನು ಮುಂದೆ ಎದುರಿಸುವುದಿಲ್ಲ. ನ್ಯಾಯಾಲಯವು ನನಗೆ ಗಲ್ಲು ಶಿಕ್ಷೆಯನ್ನು ಪರಿಗಣಿಸಬಹುದು” ಎಂದು ಮಲಿಕ್ ತಿಳಿಸಿದ್ದಾರೆ. ಆದರೆ, ತಾವು ಈ ಹತ್ಯೆ ಮಾಡಿಲ್ಲ ಎಂದೂ, ಘಟನೆಯ ಸಮಯದಲ್ಲಿ ತಾವು ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದದ್ದಾಗಿ ಉಲ್ಲೇಖಿಸಿ, ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.
ರಾಜಕೀಯ ಕಾರಣಗಳಿಗಾಗಿ ಈ ಕೇಸ್ನಲ್ಲಿ ತನ್ನನ್ನು ಸಿಲುಕಿಸಲಾಗಿದ್ದು, ತನ್ನ ಹಿಂಜರಿತವನ್ನು ಅಪರಾಧ ಒಪ್ಪಿಗೆ ಎಂದು ಭಾವಿಸಬಾರದು ಎಂದು ಯಾಸಿನ್ ಮಲಿಕ್ ಹೇಳಿದ್ದಾರೆ.
16 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ!
2009ರಲ್ಲಿ ಪಾಕಿಸ್ತಾನದ ಕಲಾಕಾರ್ ಮತ್ತು ಸಾಮಾಜಿಕ ಕಾರ್ಯಕರ್ತೆ ಮುಶಾಲ್ ಹುಸೇನ್ ಮಲ್ಲಿಕ್ ಅವರನ್ನು ಯಾಸಿನ್ ಮಲಿಕ್ ಮದುವೆಯಾಗಿದ್ದರು. ತನ್ನ ಅಫಿಡವಿಟ್ನಲ್ಲಿ ಮಲಿಕ್, “ಮುಶಾಲ್ ನನಗಿಂತ 20 ವರ್ಷ ಚಿಕ್ಕವಳು. ನನ್ನ ಅನಿಶ್ಚಿತ ಭವಿಷ್ಯದ ಕಾರಣದಿಂದ ಆಕೆ ವಿಧವೆಯಾಗಿ ಅಥವಾ ನನ್ನ ಕಷ್ಟಗಳ ಹೊರೆ ಹೊತ್ತು ಬದುಕುವುದು ನನಗಿಷ್ಟವಿಲ್ಲ. ಆಕೆ ಗೌರವ ಮತ್ತು ಹೊಸ ಭರವಸೆಯೊಂದಿಗೆ ತನ್ನ ಜೀವನದ ಮುಂದಿನ ಅಧ್ಯಾಯವನ್ನು ಆರಂಭಿಸಲಿ” ಎಂದು ಬರೆದಿದ್ದಾರೆ.
ತಾವು ಗಲ್ಲು ಶಿಕ್ಷೆಗೆ ಒಳಗಾಗುವ ಮುನ್ನವೇ ಈ ವೈವಾಹಿಕ ಬಂಧನದಿಂದ ಆಕೆಯನ್ನು ಮುಕ್ತಗೊಳಿಸುತ್ತಿರುವುದಾಗಿ ಘೋಷಿಸಿದ್ದಾರೆ. ಜೈಲಿನಲ್ಲಿದ್ದಾಗ ಪತ್ನಿಯಿಂದ ಬೇರೆಯಾದ ಸೌತ್ ಆಫ್ರಿಕಾದ ಕ್ರಾಂತಿಕಾರಿ ನಾಯಕ ನೆಲ್ಸನ್ ಮಂಡೇಲಾ ಅವರ ಉದಾಹರಣೆಯನ್ನೂ ಅವರು ಈ ವೇಳೆ ನೆನೆದಿದ್ದಾರೆ. ಕಳೆದ 8 ವರ್ಷಗಳಿಂದ ಪತ್ನಿಯೊಂದಿಗೆ ಯಾವುದೇ ರೀತಿಯ ಸಂಪರ್ಕ ಸಾಧಿಸಲು ಭಾರತೀಯ ಜೈಲು ನಿಯಮಾವಳಿಗಳು ಬಿಟ್ಟಿಲ್ಲ ಎಂದೂ ಅವರು ವಿಷಾದಿಸಿದ್ದಾರೆ.
13 ವರ್ಷದ ಮಗಳಿಗೆ ಸಂದೇಶ:
ಯಾಸಿನ್ ಮಲಿಕ್ ಮತ್ತು ಮುಶಾಲ್ ದಂಪತಿಗೆ ರಜಿಯಾ ಸುಲ್ತಾನಾ ಎಂಬ 13 ವರ್ಷದ ಮಗಳಿದ್ದಾಳೆ. ಜೈಲಿನ ಕೋಣೆಯಲ್ಲಿ ಮಗಳ ಫೋಟೋ ಮಾತ್ರ ತನ್ನೊಂದಿಗಿದೆ ಎಂದಿರುವ ಮಲಿಕ್, ಮಗಳಿಗೆ ಭಾವುಕ ಮನವಿ ಮಾಡಿದ್ದಾರೆ.
“ನನ್ನ ಅನುಪಸ್ಥಿತಿಯಲ್ಲಿ ನಿನ್ನ ಅಜ್ಜಿಯನ್ನು (ಮಲಿಕ್ ತಾಯಿ) ಚೆನ್ನಾಗಿ ನೋಡಿಕೋ. ಪ್ರತಿದಿನ ಕನಿಷ್ಠ 5 ನಿಮಿಷಗಳ ಕಾಲ ಆಕೆಗೆ ಫೋನ್ ಮಾಡಿ ಧೈರ್ಯ ತುಂಬು” ಎಂದು ಮಗಳಿಗೆ ಸಂದೇಶ ರವಾನಿಸಿದ್ದಾರೆ.
ತನಿಖಾ ಸಂಸ್ಥೆಗಳ ದೃಷ್ಟಿಕೋನವೇನು?
ಯಾಸಿನ್ ಮಲಿಕ್ ಈಗಾಗಲೇ 2022ರಲ್ಲಿ ಉಗ್ರರ ಧನಸಹಾಯ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಈಗಾಗಲೇ ಮಲಿಕ್ನ ಜೀವಾವಧಿ ಶಿಕ್ಷೆಯನ್ನು ಗಲ್ಲು ಶಿಕ್ಷೆಗೆ ಬದಲಾಯಿಸಬೇಕು ಎಂದು ದೆಹಲಿ ಹೈಕೋರ್ಟ್ನಲ್ಲಿ ಹೋರಾಟ ನಡೆಸುತ್ತಿದೆ.
ಕಾನೂನು ತಜ್ಞರು ಮತ್ತು ಭದ್ರತಾ ವಿಶ್ಲೇಷಕರ ಪ್ರಕಾರ, ಮಲಿಕ್ ನ್ಯಾಯಾಲಯದಲ್ಲಿ “ತಾವು ವಿಚಾರಣೆ ಎದುರಿಸಲ್ಲ, ಗಲ್ಲು ಶಿಕ್ಷೆ ಕೊಡಿ” ಎಂದು ಹೇಳುತ್ತಿರುವುದು ಜಾಗತಿಕವಾಗಿ ಮತ್ತು ಕಾಶ್ಮೀರ ಕಣಿವೆಯಲ್ಲಿ ತಾವೊಬ್ಬ ‘ಹುತಾತ್ಮ’ ಎಂಬಂತೆ ಬಿಂಬಿಸಿಕೊಳ್ಳುವ ಕೊನೆಯ ಹತಾಶ ಪ್ರಯತ್ನವಾಗಿದೆ.
ತಾವು ಮಾಡಿದ ಭಯೋತ್ಪಾದನಾ ಅಪರಾಧಗಳ ಮೇಲಿನ ಗಮನವನ್ನು ಬೇರೆಡೆ ಸೆಳೆಯಲು ಮಲಿಕ್ ಇಂತಹ ಭಾವುಕ ಅಫಿಡವಿಟ್ ಕಾರ್ಡ್ ಬಳಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ಐಸ್ ಕ್ರೀಮ್ ಲೋಕಕ್ಕೆ ಅಂಬಾನಿ ಎಂಟ್ರಿ: ಬೆಲೆ ಕೇವಲ 10 ರೂ.!
ಶ್ರೀನಗರದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಈ ಅಫಿಡವಿಟ್ಗೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 19, 2026 ಕ್ಕೆ ನಿಗದಿಪಡಿಸಿದ್ದು, ಅಂದು ಪ್ರಾಸಿಕ್ಯೂಷನ್ ಸಂಸ್ಥೆಗಳು ಇದಕ್ಕೆ ಪ್ರತ್ಯುತ್ತರ ನೀಡಲಿವೆ.