Pratap Simha
ಟಿ.ನರಸೀಪುರದಲ್ಲಿ ನಡೆದ ಗಣೇಶ ಮೂರ್ತಿ ವಿಸರ್ಜನಾ ಶೋಭಾಯಾತ್ರೆ ವೇಳೆ ಸಾರ್ವಜನಿಕ ಸೇವಕರು ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಪ್ರಚೋದನಾತ್ಮಕ ಭಾಷಣ ಮಾಡಿದ ಆರೋಪದ ಮೇಲೆ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರ ವಿರುದ್ಧ ಪೊಲೀಸರು ಎಫ್‌ಐಆರ್ (FIR) ದಾಖಲಿಸಿದ್ದಾರೆ.
ಗಣೇಶೋತ್ಸವ ಮೆರವಣಿಗೆಯ ಹಾದಿ ಮತ್ತು ನಿಯಮಗಳ ಕುರಿತು ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿದ್ದ ರಾಜಕೀಯ ಜಟಾಪಟಿ ಮತ್ತು ಸವಾಲು-ಪ್ರತಿ ಸವಾಲುಗಳು ಇದೀಗ ಕಾನೂನು ಹೋರಾಟದ ಸ್ವರೂಪ ಪಡೆದುಕೊಂಡಿವೆ.
ವಿವಾದದ ಹಿನ್ನೆಲೆ ಏನು?
ಟಿ.ನರಸೀಪುರ ಪಟ್ಟಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮೆರವಣಿಗೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ ಅವರು ಆಯೋಜಕರಿಗೆ ಕೆಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಿದ್ದರು.
ಮುಖ್ಯವಾಗಿ, “ಮಸೀದಿಯ ಮುಂಭಾಗದಲ್ಲಿ ಮೆರವಣಿಗೆ ಸಾಗುವಾಗ ಪಟಾಕಿ ಸಿಡಿಸಿದರೆ ಅಥವಾ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದರು. ಇನ್‌ಸ್ಪೆಕ್ಟರ್ ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಪೊಲೀಸ್ ಇನ್‌ಸ್ಪೆಕ್ಟರ್ ಅವರ ಈ ಎಚ್ಚರಿಕೆಯನ್ನು ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ನಾಯಕರು ತೀವ್ರವಾಗಿ ವಿರೋಧಿಸಿದ್ದರು. ಇನ್‌ಸ್ಪೆಕ್ಟರ್ ಧನಂಜಯ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಆರ್. ಅಶೋಕ್ ನೇತೃತ್ವದಲ್ಲಿ ಠಾಣೆಯ ಮುಂಭಾಗ ಅಹೋರಾತ್ರಿ ಧರಣಿ ಕೂಡ ನಡೆಸಲಾಗಿತ್ತು.
ಸವಾಲಾಗಿ ನಡೆದ ಶೋಭಾಯಾತ್ರೆ
ಪೊಲೀಸರ ಎಚ್ಚರಿಕೆಯನ್ನು ಸವಾಲಾಗಿ ಸ್ವೀಕರಿಸಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರು ಟಿ.ನರಸೀಪುರದಲ್ಲಿ ಅದ್ದೂರಿ ಗಣೇಶ ಶೋಭಾಯಾತ್ರೆಯನ್ನು ಆಯೋಜಿಸಿದ್ದರು. ಈ ಮೆರವಣಿಗೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಸ್ವತಃ ಭಾಗವಹಿಸಿದ್ದರು. ಮೆರವಣಿಗೆಯು ವಿವಾದಿತ ಮಸೀದಿಯ ಮುಂಭಾಗದ ರಸ್ತೆಯಲ್ಲೇ ಸಾಗಿದ್ದು, ಈ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಭಾರಿ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಾಚರಿಸಿದ್ದರು.
ಪ್ರತಾಪ್ ಸಿಂಹ ಭಾಷಣ ಮತ್ತು ಕಾಂಗ್ರೆಸ್ ದೂರು:
ಮಸೀದಿಯ ಮುಂಭಾಗದಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ಮೈಕ್ ಹಿಡಿದು ಬಹಿರಂಗವಾಗಿ ಮಾತನಾಡಿದ ಪ್ರತಾಪ್ ಸಿಂಹ, ಇನ್‌ಸ್ಪೆಕ್ಟರ್ ಧನಂಜಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಇನ್ನೊಂದುವರೆ ವರ್ಷದಲ್ಲಿ ನಮ್ಮ ಸರ್ಕಾರ ಬರಲಿದೆ, ಆಗ ಎಲ್ಲದರ ಲೆಕ್ಕ ಚುಕ್ತಾ ಮಾಡುತ್ತೇವೆ” ಎಂಬ ಧಾಟಿಯಲ್ಲಿ ಆಕ್ರೋಶ ಹೊರಹಾಕಿದ್ದರು.
ಮೆರವಣಿಗೆ ಮುಗಿಯುತ್ತಿದ್ದಂತೆಯೇ ಸಿಡಿದೆದ್ದ ಮೈಸೂರು ಜಿಲ್ಲಾ ಕಾಂಗ್ರೆಸ್ ನಾಯಕರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (SP) ದೂರು ನೀಡಿದರು. ಮೆರವಣಿಗೆಯನ್ನು ನಿಗದಿತ ಸಮಯದಲ್ಲಿ ಮುಗಿಸದೆ ಸಾರ್ವಜನಿಕರಿಗೆ ತೊಂದರೆ ನೀಡಲಾಗಿದೆ, ಕರ್ತವ್ಯ ನಿರತ ಪೊಲೀಸರಿಗೆ ಬೆದರಿಕೆ ಹಾಕಿ ಅಡ್ಡಿಪಡಿಸಲಾಗಿದೆ ಮತ್ತು ಸಮಾಜದಲ್ಲಿ ಶಾಂತಿ ಕದಡುವ ನಿಟ್ಟಿನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಕಾನೂನು ಕ್ರಮ:
ಕಾಂಗ್ರೆಸ್ ನಾಯಕರ ದೂರಿನ ಅನ್ವಯ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ಸಿಂಹ ಮತ್ತು ಇತರ ಸಂಘಟಕರ ವಿರುದ್ಧ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಸಾರ್ವಜನಿಕ ಶಾಂತಿ ಭಂಗ ತರಲು ಯತ್ನಿಸಿದ ಹಾಗೂ ಸಾರ್ವಜನಿಕ ಸೇವಕರ ಅಧಿಕೃತ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ನಲ್ಲಿರುವ 11 ನೋಬಾಲ್ ಬಗ್ಗೆ ಗೊತ್ತಿದ್ಯಾ?
ಈ ಘಟನೆಯು ಮೈಸೂರು ಜಿಲ್ಲಾದ್ಯಂತ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮುಂಬರುವ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.