ವಿದೇಶಿ ಪ್ರವಾಸಿಗರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಪ್ರಯಾಣಿಕರ ಬ್ಯಾಗೇಜ್ ನಿಯಮದಲ್ಲಿ ಸರ್ಕಾರವು ಮಹತ್ವದ ಬದಲಾವಣೆ ಮಾಡಿದ್ದು, ಈ ಬದಲಾವಣೆಯಿಂದಾಗಿ ಇನ್ಮುಂದೆ 75 ಸಾವಿರ ರೂ.ವರೆಗೆ ಸುಂಕ ರಹಿತವಾಗಿ ವಸ್ತುಗಳನ್ನು ತರಬಹುದು. ಇದಕ್ಕೂ ಮುನ್ನ ಈ ಮಿತಿ 50 ಸಾವಿರ ರೂ. ಆಗಿತ್ತು.
ಇದೀಗ 25 ಸಾವಿರ ರೂ. ಹೆಚ್ಳಳದೊಂದಿಗೆ 75 ಸಾವಿರ ರೂ.ವರೆಗಿನ ವೈಯುಕ್ತಿಕ ವಸ್ತುಗಳನ್ನು ಯಾವುದೇ ಕಸ್ಟಮ್ಸ್ ಸುಂಕವಿಲ್ಲದೆ ಭಾರತಕ್ಕೆ ತರಬಹುದು.
ಕೇಂದ್ರ ಸರ್ಕಾರ ಹೊಸ ಬ್ಯಾಗೇಜ್ ನಿಯಮದಿಂದಾಗಿ ವಿದೇಶದಿಂದ ಐಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಅಗ್ಗದ ದರದಲ್ಲಿ ತರಬಹುದಾಗಿದೆ.
ಉದಾಹರಣೆಗೆ: 75 ಸಾವಿರ ರೂ.ವರೆಗಿನ ಹೊಸ ಐಫೋನ್ ತರುತ್ತಿದ್ದರೆ ಯಾವುದೇ ಸುಂಕ ಪಾವತಿಸಬೇಕಿಲ್ಲ. ಆದರೆ ಇದಕ್ಕಿಂತ ಹೆಚ್ಚಿನ ಮೌಲ್ಯದ ಫೋನ್ಗಳನ್ನು ತರುವುದಾದರೆ ಶೇ.10 ರಷ್ಡು ಕಸ್ಟಮ್ಸ್ ಸುಂಕ ಮತ್ತು ಹೆಚ್ಚುವರಿ ಸೆಸ್ ಪಾವತಿಸಬೇಕಾಗುತ್ತದೆ.
ಅಂದರೆ ಹೊಸ ಐಫೋನ್ 16 ಅಥವಾ ಐಫೋನ್ 17 ಫೋನ್ಗಳ ಬೆಲೆ 80 ಸಾವಿರದಿಂದ 1 ಲಕ್ಷ ರೂ.ವರೆಗೆ ಇದೆ. ಈ ಹೊಸ ಫೋನ್ಗಳನ್ನು ತಂದರೆ ಸುಂಕ ವಿಧಿಸಲಿದ್ದಾರೆ.
ಇದಾಗ್ಯೂ ಈಗಾಗಲೇ ಬಳಸಲಾಗುತ್ತಿರುವ ಐಫೋನ್ ಅಥವಾ ಓಪನ್ ಬಾಕ್ಸ್ ಫೋನ್ಗಳ ಮೇಲೆ ಯಾವುದೇ ಸುಂಕ ವಿಧಿಸಲಾಗುವುದಿಲ್ಲ. ಹಾಗೆಯೇ ಒಂದು ಹೊಸ ಲ್ಯಾಪ್ ಟಾಪ್ ಅನ್ನು ಸಹ ಸುಂಕ ರಹಿತವಾಗಿ ತರಬಹುದು.
ಆಭರಣಗಳಿಗೂ ಮಿತಿ:
ಹೊಸ ಬ್ಯಾಗೇಜ್ ನಿಯಮದಡಿಯಲ್ಲಿ ಆಭರಣಗಳ ಸುಂಕದಲ್ಲೂ ಬದಲಾವಣೆ ಮಾಡಲಾಗಿದೆ. ಮುಖ್ಯವಾಗಿ ಇಲ್ಲಿ ತೂಕ ಆಧಾರಿತ ಮಾನದಂಡಗಳನ್ನು ಪುನರ್ರಚಿಸಲಾಗಿದೆ. ಅದರಂತೆ ಒಂದು ವರ್ಷಕ್ಕೂ ಹೆಚ್ಚು ಕಾಲ ವಿದೇಶದಲ್ಲಿ ಉಳಿದು ಭಾರತಕ್ಕೆ ಮರಳುವಾಗ ಮಹಿಳೆಯರು 40 ಗ್ರಾಂ ಚಿನ್ನವನ್ನು ಸುಂಕ ರಹಿತವಾಗಿ ತರಬಹುದು.ಹಾಗೆಯೇ ಇತರರಿಗೆ 20 ಗ್ರಾಂ ವರೆಗೆ ಸುಂಕ ರಹಿತ ಆಭರಣಗಳನ್ನು ತರಲು ಅವಕಾಶ ನೀಡಲಾಗುತ್ತದೆ.
ಇದನ್ನೂ ಓದಿ: ‘ಗೃಹಲಕ್ಷ್ಮಿ’ ಹಣ ಪಡೆಯಲು ಹೊಸ ರೂಲ್ಸ್
ಹೀಗೆ ಸುಂಕ ರಹಿತವಾಗಿ ಫೋನ್, ಲ್ಯಾಪ್ ಟಾಪ್, ಚಿನ್ನ ಹಾಗೂ ಇತರೆ ವಸ್ತುಗಳನ್ನು ತರುವಾಗ ದಂಡದಿಂದ ಪಾರಾಗಲು ನಿಮ್ಮ ಬಳಿ ಬಿಲ್ ಇರಬೇಕಾಗಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ವಿದೇಶದಿಂದ ಬರುವಾಗ ನೀವು ಖರೀದಿಸಿದ ವಸ್ತುಗಳ ಬಿಲ್ ಅನ್ನು ಸಹ ಜೊತೆಯಲ್ಲಿಕೊಳ್ಳಬೇಕಾಗುತ್ತದೆ.