Kerala Drug Teachers
ಗುರುರ್ಬ್ರಹ್ಮಾ ಗುರುರ್ವಿಷ್ಣುರ್ಗುರುರ್ದೇವೋ ಮಹೇಶ್ವರಃ | ಗುರುರೇವ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ ಎಂಬ ಶ್ಲೋಕವೊಂದಿದೆ. ಇದರ ಭಾವಾರ್ಥ “ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ಮಹೇಶ್ವರ . ಆ ಗುರು ಒಬ್ಬನೇ ಸಾಕ್ಷಾತ್ ಪರಬ್ರಹ್ಮ ಸ್ವರೂಪನಾಗಿದ್ದಾನೆ. ಅಂತಹ ಶ್ರೀಸದ್ಗುರುವಿಗೆ ನನ್ನ ನಮಸ್ಕಾರಗಳು.
ಭಾರತೀಯ ಸಂಸ್ಕೃತಿಯಲ್ಲಿ ಗುರುವನ್ನು ಕೇವಲ ಒಬ್ಬ ಶಿಕ್ಷಕರಾಗಿ ಅಥವಾ ಸಾಮಾನ್ಯ ವ್ಯಕ್ತಿಯಾಗಿ ನೋಡುವುದಿಲ್ಲ. ಬದಲಿಗೆ ದೈವಿಕ ಶಕ್ತಿಯ ರೂಪವಾಗಿ ಕಾಣಲಾಗುತ್ತದೆ ಎಂಬುದಕ್ಕೆ ಈ ಶ್ಲೋಕವೇ ಸಾಕ್ಷಿ. ಆದರೆ, ಇಂತಹ ಪವಿತ್ರ ವೃತ್ತಿಯಲ್ಲಿದ್ದುಕೊಂಡು, ಹಗಲಿನಲ್ಲಿ ಪಾಠ ಮಾಡುತ್ತಾ ರಾತ್ರಿಯಾಗುತ್ತಲೇ ಕೋಟಿಗಟ್ಟಲೆ ವ್ಯವಹಾರ ನಡೆಸುವ ಡ್ರಗ್ ಮಾಫಿಯಾದ ಪ್ರಮುಖ ಏಜೆಂಟರಾಗಿ ಬದಲಾಗುವ ಕರಾಳ ಮುಖಗಳೂ ಸಮಾಜದಲ್ಲಿವೆ. ಇತ್ತೀಚೆಗೆ ಇಂತಹದ್ದೇ ಕೃತ್ಯದಲ್ಲಿ ತೊಡಗಿದ್ದ ಮೂವರು ಶಿಕ್ಷಕಿಯರು ಕೊನೆಗೂ ಸಿಕ್ಕಿಬಿದ್ದಿದ್ದಾರೆ.
ದಂಧೆಯ ರಹಸ್ಯ ಆರಂಭ:
ಈ ಕರಾಳ ಕಥೆ ಆರಂಭವಾಗುವುದು ಪೆರಂಬ್ರದ ಬ್ಲಾಕ್ ಸಂಪನ್ಮೂಲ ಕೇಂದ್ರದ (BRC) ಶಾಲೆಯಲ್ಲಿ. ಅಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮೂವರು ಶಿಕ್ಷಕಿಯರಾದ ಕೆ. ಸಿ. ಕೀರ್ತನಾ (ದೈಹಿಕ ಶಿಕ್ಷಣ ಶಿಕ್ಷಕಿ), ಕೆ. ಕಾವ್ಯ (ವಿಶೇಷ ಶಿಕ್ಷಕಿ) ಮತ್ತು ವಿ. ಪಿ. ನಿಷ್ಮಾ ಒಟ್ಟಾಗಿ ಒಂದು ರಹಸ್ಯ ಜಾಲವನ್ನು ಹೆಣೆದರು.
ಈ ಜಾಲದ ಮೂಲಕ ಅವರು ನೇರವಾಗಿ ಯಾರನ್ನೂ ಭೇಟಿಯಾಗುತ್ತಿರಲಿಲ್ಲ. ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆಗಳನ್ನು ತೆರೆದು, ಅದರ ಮೂಲಕ ಯುವಕರು ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತಿದ್ದರು.
ಗ್ರಾಹಕರಿಗೆ ಡ್ರಗ್ಸ್ ಬೇಕೆಂದಾಗ, ಅವರು ಗಲ್ಫ್ ದೇಶದ ಮೊಬೈಲ್ ಸಂಖ್ಯೆಯೊಂದಕ್ಕೆ ಸಂದೇಶ ಕಳುಹಿಸಬೇಕಿತ್ತು. ಅಲ್ಲಿಂದ ಗ್ರಾಹಕರಿಗೆ ಒಂದು ಕ್ಯೂಆರ್ ಕೋಡ್ ಸಿಗುತ್ತಿತ್ತು. ಆ ಕೋಡ್ ಶಿಕ್ಷಕಿ ಕೀರ್ತನಾಳ ಬ್ಯಾಂಕ್ ಖಾತೆಗೆ ಲಿಂಕ್ ಆಗಿತ್ತು.
ಹಣ ಪಾವತಿಯಾದ ತಕ್ಷಣ, ಡ್ರಗ್ಸ್ ಅನ್ನು ಯಾವುದೋ ನಿರ್ಜನ ಪ್ರದೇಶದ ಪೊದೆಗಳಲ್ಲೋ ಅಥವಾ ಕಲ್ಲುಗಳ ಸಂದಿಯಲ್ಲೋ ಅಡಗಿಸಿಟ್ಟು, ಆ ಜಾಗದ ಫೋಟೋ ಮತ್ತು ಲೊಕೇಶನ್ ಅನ್ನು ಗ್ರಾಹಕರಿಗೆ ಕಳುಹಿಸಲಾಗುತ್ತಿತ್ತು. ಇದನ್ನು ಡ್ರಗ್ ಮಾಫಿಯಾ ಜಗತ್ತಿನಲ್ಲಿ ‘ಡೆಡ್ ಡ್ರಾಪ್’ ವಿಧಾನ ಎನ್ನಲಾಗುತ್ತದೆ.
ಇಂತಹದೊಂದು ಡೆಡ್ ಡ್ರಾಪ್ ವಿಧಾನದ ಮೂಲಕ ಡ್ರಗ್ಸ್ ಮಾಫಿಯಾ ನಡೆಸುತ್ತಿದ್ದವರೇ ಶಿಕ್ಷಕಿಯರಾದ ಕೀರ್ತನಾ, ಕಾವ್ಯ ಹಾಗೂ ನಿಷ್ಮಾ.
ಒಂದು ಸಣ್ಣ ಸುಳಿವು:
ಕಳೆದ ಕೆಲ ವರ್ಷಗಳಿಂದ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದರೂ ಮೂವರು ಶಿಕ್ಷಕಿಯರು ಎಲ್ಲೂ ಕೂಡ ಸಿಕ್ಕಿ ಬಿದ್ದಿರಲಿಲ್ಲ. ಅದರಲ್ಲೂ ಒಂದೇ ಒಂದು ಸುಳಿವು ನೀಡಿರಲಿಲ್ಲ.
ಆದರೆ ಕೆಲವು ತಿಂಗಳುಗಳ ಹಿಂದೆ ವಡಾಕರ ಮೂಲದ ಸಫ್ವಾನ್ ಎಂಬಾತನನ್ನು ಪೊಲೀಸರು 2 ಗ್ರಾಂ MDMA ಮಾದಕ ದ್ರವ್ಯದೊಂದಿಗೆ ಬಂಧಿಸಿದ್ದರು. ಈತನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಇಡೀ ಹಗರಣದ ಮೊದಲ ಕೊಂಡಿ ಸಿಕ್ಕಿತು.
ಸಫ್ವಾನ್ ಮೊಬೈಲ್ ಪರಿಶೀಲಿಸಿದಾಗ ಆತ ಡ್ರಗ್ಸ್ ಖರೀದಿಸಲು ಗಲ್ಫ್ ಮೂಲದ ಮೊಬೈಲ್ ಸಂಖ್ಯೆಯೊಂದಕ್ಕೆ ಸಂದೇಶ ಕಳುಹಿಸುತ್ತಿದ್ದದ್ದು ಪತ್ತೆಯಾಯಿತು.
ಪೊಲೀಸರ ವಿಶೇಷ ತನಿಖಾ ತಂಡ ಆ ಕ್ಯೂಆರ್ ಕೋಡ್ ಬ್ಯಾಂಕಿನ ಯಾವ ಖಾತೆಗೆ ಲಿಂಕ್ ಆಗಿದೆ ಎಂದು ಸೈಬರ್ ಸೆಲ್ ಸಹಾಯದಿಂದ ತಪಾಸಣೆ ನಡೆಸಿತು. ಈ ವಿಚಾರಣೆಯ ವೇಳೆ, ಕ್ಯೂಆರ್ ಕೋಡ್ ಹೋಗಿ ನಿಂತದ್ದು ಶಾಲಾ ಶಿಕ್ಷಕಿಯ ಖಾತೆಯ ಮೇಲೆ.
ಪೊಲೀಸರ ಕಣ್ಣಿಗೆ ಬಿದ್ದ ‘ಲಕ್ಷುರಿ ಲೈಫ್’
ತಿಂಗಳಿಗೆ ಕೇವಲ ₹12,000 ಸಂಬಳ ಪಡೆಯುತ್ತಿದ್ದ ಈ ಶಿಕ್ಷಕಿಯರ ಜೀವನಶೈಲಿ ದಿಢೀರನೆ ಬದಲಾಗಿತ್ತು. ದುಬಾರಿ ಐಷಾರಾಮಿ ಕಾರುಗಳಲ್ಲಿ ಶಾಲೆಗೆ ಬರುವುದು, ಬ್ರ್ಯಾಂಡೆಡ್ ಬಟ್ಟೆಗಳು, ಕೈಯಲ್ಲಿ ದುಬಾರಿ ಮೊಬೈಲ್‌ಗಳು ಮತ್ತು ಪಾರ್ಟಿಗಳನ್ನು ಮಾಡುವುದನ್ನು ಕಂಡು ಸಹೋದ್ಯೋಗಿಗಳಿಗೆ ಮತ್ತು ಸ್ಥಳೀಯರಿಗೆ ಸಂಶಯ ಮೂಡಿತು.
ಇದೇ ಸಮಯದಲ್ಲಿ ಕೇರಳ ಪೊಲೀಸರು ಮಾದಕ ದ್ರವ್ಯ ಮುಕ್ತ ಅಭಿಯಾನದ ಭಾಗವಾಗಿ ‘ಆಪರೇಷನ್ ತೂಫಾನ್’ ಆರಂಭಿಸಿದ್ದರು. ಕ್ಯೂಆರ್ ಕೋಡ್ ಹಾಗೂ ಸ್ಥಳೀಯರಿಂದ ಸಿಕ್ಕ ಸಣ್ಣ ಸುಳಿವಿನ ಆಧಾರದ ಮೇಲೆ ಸೈಬರ್ ಸೆಲ್ ಮತ್ತು ವಿಶೇಷ ತನಿಖಾ ತಂಡ (SIT) ಈ ಶಿಕ್ಷಕಿಯರ ಮೊಬೈಲ್ ನಂಬರ್ ಹಾಗೂ ಬ್ಯಾಂಕ್ ಖಾತೆಗಳ ಮೇಲೆ ರಹಸ್ಯ ನಿಗಾ ಇಡಲು ಆರಂಭಿಸಿತು.
ಬಯಲಾಯ್ತು ಕೋಟಿಗಳ ರಹಸ್ಯ!
ಪೊಲೀಸರು ಕೀರ್ತನಾ ಮತ್ತು ಕಾವ್ಯಾಳ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಪರಿಶೀಲಿಸಿದಾಗ ಅಧಿಕಾರಿಗಳೇ ಬೆಚ್ಚಿಬಿದ್ದರು. ಕೇವಲ ₹12,000 ಸಂಬಳದ ಖಾತೆಗೆ ಲಕ್ಷಾಂತರ ರೂಪಾಯಿ ಹರಿದು ಬರುತ್ತಿತ್ತು. ಕೀರ್ತನಾಳ ಖಾತೆಗೆ ಕೇವಲ ಒಂದು ವರ್ಷದಲ್ಲಿ ₹14 ಲಕ್ಷ ಹಾಗೂ ಕಾವ್ಯಾಳ ಖಾತೆಗೆ ಕೇವಲ ಐದು ತಿಂಗಳಲ್ಲೇ ₹9 ಲಕ್ಷ ಜಮೆಯಾಗಿತ್ತು. ಇಷ್ಟೇ ಅಲ್ಲದೆ, ಇವರ ಇತರ ರಹಸ್ಯ ಖಾತೆಗಳ ಮೂಲಕ ಒಟ್ಟು ಕೋಟಿಗಟ್ಟಲೆ ರೂಪಾಯಿಗಳ ಅಕ್ರಮ ಹಣದ ವಹಿವಾಟು ನಡೆದಿರುವುದು ಡಿಜಿಟಲ್ ಸಾಕ್ಷ್ಯಗಳ ಸಮೇತ ಪತ್ತೆಯಾಯಿತು.
ಅತ್ಯಂತ ಆಘಾತಕಾರಿ ವಿಷಯವೆಂದರೆ, ಕೀರ್ತನಾ ಶಾಲಾ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವಿರೋಧಿ ಜಾಗೃತಿ ಮೂಡಿಸುವ ಸರ್ಕಾರಿ ಲಹರಿ ಮುಕ್ತ ಅಭಿಯಾನದ ಜುಂಬಾ ನೃತ್ಯ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿದ್ದಳು! ಹೊರಗೆ ಜಾಗೃತಿ ನಾಟಕವಾಡುತ್ತಾ, ಒಳಗೆ ಅದೇ ಮಕ್ಕಳಿಗೆ ವಿಷ ಉಣಿಸುವ ಜಾಲದಲ್ಲಿದ್ದಳು.
ಮಧ್ಯರಾತ್ರಿಯ ‘ಆಪರೇಷನ್’!
ಪಕ್ಕಾ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ ಎಸ್‌ಐಟಿ ಪೊಲೀಸರು ಕಾರ್ಯಾಚರಣೆಗೆ ಇಳಿದರು. ಮೂವರನ್ನು ವಿವಿಧ ಹಂತಗಳಲ್ಲಿ ಬಂಧಿಸಲು ಯೋಜನೆ ರೂಪಿಸಿದರು.
- ಮೊದಲ ಹಂತ: ಮೊದಲು ಕೀರ್ತನಾ ಮತ್ತು ಕಾವ್ಯಾಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ಆರಂಭದಲ್ಲಿ ನಾಟಕವಾಡಿದ ಶಿಕ್ಷಕಿಯರು, ಪೊಲೀಸರು ಡಿಜಿಟಲ್ ಸಾಕ್ಷ್ಯಗಳು ಮತ್ತು ಬ್ಯಾಂಕ್ ವಹಿವಾಟಿನ ದಾಖಲೆಗಳನ್ನು ಮುಂದಿಟ್ಟಾಗ ತತ್ತರಿಸಿಹೋಗಿ ತಮ್ಮ ತಪ್ಪನ್ನು ಒಪ್ಪಿಕೊಂಡರು.
- ದ್ವಿತೀಯ ಹಂತ: ಇವರ ಮೊಬೈಲ್ ಚಾಟ್‌ಗಳನ್ನು ಪರಿಶೀಲಿಸಿದಾಗ ಮೂರನೇ ಶಿಕ್ಷಕಿ ವಿ. ಪಿ. ನಿಷ್ಮಾಳ ಪಾತ್ರವೂ ಬಯಲಾಯಿತು. ತಕ್ಷಣವೇ ಪೊಲೀಸರು ನಿಷ್ಮಾಳನ್ನೂ ಬಂಧಿಸಿದರು.
ಡ್ರಗ್ಸ್ ಟೀಚರ್ಸ್:
ಮೂವರು ಶಿಕ್ಷಕಿಯರನ್ನು ಬಂಧಿಸಿದ ಬಳಿಕ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಈ ವೇಳೆ ಈ ಶಿಕ್ಷಕಿಯರು ಕೇವಲ ಡ್ರಗ್ಸ್ ಮಾರಾಟ ಮಾಡುತ್ತಿರಲಿಲ್ಲ, ಬದಲಿಗೆ ತಾವೂ ಕೂಡ ನಿಯಮಿತವಾಗಿ ಮಾರಕ ಎಂಡಿಎಂಎ (MDMA) ಸಿಂಥೆಟಿಕ್ ಡ್ರಗ್ಸ್ ಸೇವಿಸುತ್ತಿದ್ದರು ಎಂಬುದು ದೃಢಪಟ್ಟಿತು.
ಇದನ್ನೂ ಓದಿ: ಭಾರತ ಟೆಸ್ಟ್ ತಂಡ ಪ್ರಕಟ: ಮೂವರು ಕನ್ನಡಿಗರು ಆಯ್ಕೆ
ತನಿಖೆ ಎಲ್ಲಿಗೆ ತಲುಪಿದೆ?
ಪ್ರಕರಣ ಬಹಿರಂಗವಾಗುತ್ತಿದ್ದಂತೆ ಕೇರಳ ಶಿಕ್ಷಣ ಇಲಾಖೆ ಮೂವರನ್ನೂ ತಕ್ಷಣವೇ ಸೇವೆಯಿಂದ ವಜಾಗೊಳಿಸಿದೆ. ಈ ಶಿಕ್ಷಕಿಯರು ಕೇವಲ ಕರಾವಳಿ ತೀರದ ಏಜೆಂಟರಷ್ಟೇ ಆಗಿದ್ದರು. ಇವರ ಹಿಂದೆ ಕರ್ನಾಟಕದ ಬೆಂಗಳೂರು ಮತ್ತು ಮಂಗಳೂರಿನ ದೊಡ್ಡ ಡ್ರಗ್ ನೆಟ್‌ವರ್ಕ್ ಹಾಗೂ ಗಲ್ಫ್ ದೇಶಗಳ ಲಿಂಕ್ ಇರುವುದು ಪತ್ತೆಯಾಗಿದೆ. ಸದ್ಯ ಈ ಶಿಕ್ಷಕಿಯರು ಜೈಲು ಕಂಬಿ ಎಣಿಸುತ್ತಿದ್ದು, ಈ ಅಂತರರಾಜ್ಯ ಮಾಫಿಯಾದ ಕಿಂಗ್‌ಪಿನ್ ಯಾರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಬೆಂಗಳೂರಿನತ್ತ ತನಿಖೆ ಚುರುಕುಗೊಳಿಸಿದ್ದಾರೆ.