ರಾಜ್ಯ ರಾಜಕಾರಣದ ಇತಿಹಾಸದಲ್ಲೇ ಅತ್ಯಂತ ರೋಚಕ ಮತ್ತು ನಾಟಕೀಯ ಬೆಳವಣಿಗೆಯೊಂದಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯ ಹೈಕಮಾಂಡ್‌ನ ಅಧಿಕೃತ ಪಟ್ಟಿಯಲ್ಲಿ ಹೆಸರಿದ್ದರೂ, ಕೊನೆಯ ಕ್ಷಣದಲ್ಲಿ ಪ್ರಮಾಣ ವಚನ ಸ್ವೀಕರಿಸಲಾಗದೆ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರು ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.
20 ಸಚಿವರು ಪ್ರಮಾಣ ವಚನ ಸ್ವೀಕರಿಸಬೇಕಿದ್ದ ಜಾಗದಲ್ಲಿ 19 ಮಂದಿ ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಗಾಯತ್ರಿ ಶಾಂತೇಗೌಡ ಅವರ ಪಾಲಿಗೆ ರಾಜಕೀಯ ಅದೃಷ್ಟದ ಬಾಗಿಲು ತೆರೆದಷ್ಟೇ ವೇಗವಾಗಿ ಮುಚ್ಚಿಕೊಂಡಿದೆ.
ಬೆನ್ನಲ್ಲೇ ಒಲಿದಿದ್ದ ಅದೃಷ್ಟದ ಬಾಗಿಲು!
ಚಿಕ್ಕಮಗಳೂರು ಜಿಲ್ಲೆಯ ಪ್ರಭಾವಿ ನಾಯಕಿ ಹಾಗೂ ಕುರುಬ ಸಮುದಾಯದ ಗಾಯತ್ರಿ ಶಾಂತೇಗೌಡ ಅವರು ಇತ್ತೀಚೆಗಷ್ಟೇ ಸುದೀರ್ಘ ಕಾನೂನು ಹೋರಾಟ ನಡೆಸಿ ಹೈಕೋರ್ಟ್ ಆದೇಶದ ಮರು ಎಣಿಕೆಯಲ್ಲಿ ಜಯಗಳಿಸಿ ವಿಧಾನಪರಿಷತ್ ಸದಸ್ಯೆಯಾಗಿ ಆಯ್ಕೆಯಾಗಿದ್ದರು.
ಇನ್ನು ಅವರು ಪರಿಷತ್ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಹೈಕಮಾಂಡ್ ಬಿಡುಗಡೆ ಮಾಡಿದ ಸಂಪುಟ ವಿಸ್ತರಣೆಯ ಪಟ್ಟಿಯಲ್ಲಿ ಅವರ ಹೆಸರು ಅಚ್ಚರಿಯ ರೀತಿಯಲ್ಲಿ ಸೇರ್ಪಡೆಯಾಗಿತ್ತು. ಲಕ್ಷ್ಮೀ ಹೆಬ್ಬಾಳ್ಕರ್, ನಯನಾ ಮೋಟಮ್ಮ ಅವರಂತಹ ಪ್ರಮುಖ ನಾಯಕಿಯರನ್ನು ಬದಿಗಿಟ್ಟು ಏಕೈಕ ಮಹಿಳಾ ಕೋಟಾದಡಿ ಗಾಯತ್ರಿ ಅವರಿಗೆ ಸಚಿವ ಸ್ಥಾನ ಫಿಕ್ಸ್ ಆಗಿತ್ತು.
ಕೊನೆ ಕ್ಷಣದಲ್ಲಿ ಬದಲಾದ ಲೆಕ್ಕಾಚಾರ!
ಆಗಸ್ಟ್ 3ರ ಸೋಮವಾರ ಸಂಜೆ 4:05ಕ್ಕೆ ನಿಗದಿಯಾಗಿದ್ದ ರಾಜಭವನದ ಪ್ರಮಾಣ ವಚನ ಕಾರ್ಯಕ್ರಮವು ಆರಂಭದಿಂದಲೂ ತೀವ್ರ ಗೊಂದಲಕ್ಕೆ ಕಾರಣವಾಗಿತ್ತು. ಸಚಿವ ಸ್ಥಾನ ಸಿಗದ ಹಲವು ಹಿರಿಯ ಶಾಸಕರು ತೀವ್ರ ಬಂಡಾಯ ಎದ್ದು, ಶಾಸಕ ಸ್ಥಾನಗಳಿಗೂ ರಾಜೀನಾಮೆ ನೀಡಲು ಮುಂದಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಚೇರಿ ಕಾರ್ಯಕ್ರಮವನ್ನು ಸಂಜೆ 5 ಗಂಟೆಗೆ ಮುಂದೂಡಿತು.
ಈ ಗೊಂದಲದ ನಡುವೆಯೇ ಹೈಕಮಾಂಡ್ ಬಿಡುಗಡೆ ಮಾಡಿದ ಎರಡನೇ ಪರಿಷ್ಕೃತ ಪಟ್ಟಿಯಲ್ಲಿ ಭಟ್ಕಳದ ಮಂಕಾಳ ವೈದ್ಯ ಅವರ ಹೆಸರನ್ನು ಕೈಬಿಟ್ಟು ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಅವಕಾಶ ನೀಡಲಾಗಿತ್ತು.
ಆದರೆ, ರಾಜಭವನದಲ್ಲಿ ಸಚಿವರ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ಆರಂಭವಾದಾಗ ಗಾಯತ್ರಿ ಶಾಂತೇಗೌಡ ಅವರು ವೇದಿಕೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಕಳುಹಿಸಿದ ಅಧಿಕೃತ ಪಟ್ಟಿಯಲ್ಲೇ ಹೆಸರಿದ್ದರೂ, ಆಡಳಿತ ಪಕ್ಷದೊಳಗಿನ ತೀವ್ರ ಭಿನ್ನಮತ ಮತ್ತು ಆಂತರಿಕ ಒತ್ತಡಕ್ಕೆ ಮಣಿದ ನಾಯಕತ್ವವು ಕೊನೆ ಕ್ಷಣದಲ್ಲಿ ಅವರ ಹೆಸರನ್ನು ತಡೆಹಿಡಿಯಿತು ಎನ್ನಲಾಗಿದೆ.
ಮಹಿಳಾ ಪ್ರಾತಿನಿಧ್ಯವಿಲ್ಲದ “ಡಿಕೆಶಿ” ಸಂಪುಟ!
ಈ ಸಂಪುಟ ವಿಸ್ತರಣೆಯ ಬಳಿಕ ಡಿ.ಕೆ. ಶಿವಕುಮಾರ್ ಸಂಪುಟದ ಒಟ್ಟು ಸಚಿವರ ಸಂಖ್ಯೆ 33ಕ್ಕೇರಿದೆ. ಆದರೆ ಅತ್ಯಂತ ಆಘಾತಕಾರಿ ಮತ್ತು ಚರ್ಚಾಸ್ಪದ ವಿಷಯವೆಂದರೆ, ಗಾಯತ್ರಿ ಶಾಂತೇಗೌಡ ಅವರು ಕೊನೆ ಕ್ಷಣದಲ್ಲಿ ಡ್ರಾಪ್ ಆದ ಹಿನ್ನೆಲೆಯಲ್ಲಿ ಪ್ರಸ್ತುತ ಕರ್ನಾಟಕ ಸರ್ಕಾರದ ಸಚಿವ ಸಂಪುಟದಲ್ಲಿ ಒಬ್ಬನೇ ಒಬ್ಬ ಮಹಿಳಾ ಸಚಿವರೂ ಇಲ್ಲದಂತಾಗಿದೆ. ಇದು ಸದ್ಯ ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಗ್ರಾಸವಾಗಿದ್ದು, ಪ್ರತಿಪಕ್ಷಗಳಿಗೂ ದೊಡ್ಡ ಅಸ್ತ್ರವಾಗಿ ಸಿಕ್ಕಂತಾಗಿದೆ.
ತೀವ್ರಗೊಂಡ ಬಂಡಾಯದ ಕಿಡಿ!
ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಸಚಿವ ಸ್ಥಾನ ಸಿಗದ ಬೇಸರದಲ್ಲಿ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಹಾಗೂ ಬೆಲೂರು ಗೋಪಾಲಕೃಷ್ಣ ಅವರು ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಿಷ್ಠಾವಂತರಿಗೆ ಪಕ್ಷದಲ್ಲಿ ಬೆಲೆಯಿಲ್ಲ ಎಂದು ನಾಯಕರು ಬಹಿರಂಗವಾಗಿಯೇ ಆಕ್ರೋಶ ಹೊರಹಾಕುತ್ತಿದ್ದಾರೆ.
ಕಾನೂನು ಸಮರದಲ್ಲಿ ಗೆದ್ದು ಬೀಗಿದ್ದ ಗಾಯತ್ರಿ ಶಾಂತೇಗೌಡ ಅವರಿಗೆ ರಾಜಭವನದ ದ್ವಾರದವರೆಗೂ ಬಂದು ಮಂತ್ರಿಗಿರಿ ಕೈತಪ್ಪಿರುವುದು ಅವರ ಬೆಂಬಲಿಗರಲ್ಲಿ ತೀವ್ರ ನಿರಾಶೆ ಮೂಡಿಸಿದೆ. ರಾಜಕೀಯದಲ್ಲಿ “ಕೊನೆ ಕ್ಷಣದವರೆಗೂ ಏನೂ ಬೇಕಾದರೂ ಆಗಬಹುದು” ಎಂಬುದಕ್ಕೆ ಈ ಘಟನೆ ಮತ್ತೊಂದು ಜೀವಂತ ಉದಾಹರಣೆಯಾಗಿ ಉಳಿಯಲಿದೆ.
ಇದನ್ನೂ ಓದಿ: ಝಮೀರ್ ಅಹ್ಮದ್ ರಿಎಂಟ್ರಿ: ತಲೆಕೆಳಗಾದ ಮುಸ್ಲಿಂ ಮುಖಂಡರ ಲೆಕ್ಕಾಚಾರ!
ಇಂದು ಪ್ರಮಾಣವಚನ ಸ್ವೀಕರಿಸಿದ ಶಾಸಕರು:
- ಡಾ. ಅಜಯ್ ಸಿಂಗ್ (ಜೇವರ್ಗಿ)
- ಎಚ್. ಸಿ. ಬಾಲಕೃಷ್ಣ (ಮಾಗಡಿ)
- ಕೆ. ಎಸ್. ಬಸವಂತಪ್ಪ (ಮಾಯಕೊಂಡ)
- ಬಸವರಾಜ್ ರಾಯರೆಡ್ಡಿ (ಯಲಬುರ್ಗಾ)
- ಎನ್. ಚಲುವರಾಯಸ್ವಾಮಿ (ನಾಗಮಂಗಲ)
- ಲಕ್ಷ್ಮಣ್ ಸವದಿ (ಅಥಣಿ)
- ಮಧು ಬಂಗಾರಪ್ಪ (ಸೊರಬ)
- ಎಸ್. ಎಸ್. ಮಲ್ಲಿಕಾರ್ಜುನ್ (ದಾವಣಗೆರೆ ಉತ್ತರ)
- ಬಿ. ನಾಗೇಂದ್ರ (ಬಳ್ಳಾರಿ ಗ್ರಾಮೀಣ)
- ಪಿ. ಎಂ. ನರೇಂದ್ರಸ್ವಾಮಿ (ಮಳವಳ್ಳಿ)
- ಸಿ. ಪುಟ್ಟರಂಗಶೆಟ್ಟಿ (ಚಾಮರಾಜನಗರ)
- ಟಿ. ರಘುಮೂರ್ತಿ (ಚಳ್ಳಕೆರೆ)
- ರಿಝ್ವಾನ್ ಅರ್ಷದ್ (ಶಿವಾಜಿನಗರ)
- ರುದ್ರಪ್ಪ ಲಮಾಣಿ (ಹಾವೇರಿ)
- ಸಂತೋಷ್ ಲಾಡ್ (ಕಲಘಟಗಿ)
- ಕೆ. ಎಂ. ಶಿವಲಿಂಗೇಗೌಡ (ಅರಸೀಕೆರೆ)
- ಶಿವರಾಜ್ ತಂಗಡಗಿ (ಕನಕಗಿರಿ)
- ವಿಜಯಾನಂದ ಕಾಶಪ್ಪನವರ್ (ಬಾಗಲಕೋಟೆ)
- ಝಮೀರ್ ಅಹಮದ್ ಖಾನ್ (ಚಾಮರಾಜಪೇಟೆ)