RSS
ಯಾದಗಿರಿಯಲ್ಲಿ ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಇಬ್ಬರು ಸರ್ಕಾರಿ ಶಿಕ್ಷಕರನ್ನು ಅಮಾನತುಗೊಳಿಸಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (DDPI) ಕಠಿಣ ಆದೇಶ ಹೊರಡಿಸಿದ್ದಾರೆ. ಘಟನೆ ನಡೆದು ಸುಮಾರು 9 ತಿಂಗಳ ಸುದೀರ್ಘ ಅವಧಿಯ ಬಳಿಕ ಈ ಶಿಸ್ತುಕ್ರಮ ಕೈಗೊಳ್ಳಲಾಗಿದೆ.
ಅಮಾನತುಗೊಂಡ ಶಿಕ್ಷಕರು ಯಾರು?
ವಿಜಯಪುರ ಜಿಲ್ಲೆಯ ತಾಳಿಕೋಟಡಿಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪಥಸಂಚಲನದಲ್ಲಿ ಭಾಗವಹಿಸಿದ ಆರೋಪದ ಮೇಲೆ ಇಬ್ಬರು ಶಿಕ್ಷಕರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ:
- ಗುರುರಾಜ್ ಜೋಶಿ: ಹುಣಸಗಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ.
- ಅಣ್ಣಾಸಾಹೇಬ್ ದೇಶ್ಮುಖ್: ಹುಣಸಗಿ ತಾಲೂಕಿನ ಕುಪ್ಪಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ.
9 ತಿಂಗಳ ಬಳಿಕ ಕ್ರಮಕ್ಕೆ ಕಾರಣವೇನು?
ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಆರ್ಎಸ್ಎಸ್ನ 100ನೇ ವರ್ಷದ ಅಂಗವಾಗಿ ತಾಳಿಕೋಟಡಿಯಲ್ಲಿ ಬೃಹತ್ ಪಥಸಂಚಲನ ಆಯೋಜಿಸಲಾಗಿತ್ತು. ಈ ಇಬ್ಬರು ಶಿಕ್ಷಕರು ಸರ್ಕಾರಿ ಸೇವೆಯಲ್ಲಿದ್ದೂ ನಿಯಮಗಳನ್ನು ಗಾಳಿಗೆ ತೂರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದರ ವಿರುದ್ಧ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಹಾಗೂ ದಲಿತ ಪರ ಸಂಘಟನೆಗಳ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಶಿಕ್ಷಕರು ಸರ್ಕಾರಿ ಸೇವಾ ನಿಯಮಾವಳಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ, ಅಂದಿನ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸರಣಿ ದೂರುಗಳನ್ನು ನೀಡಲಾಗಿತ್ತು. ಈ ಸುದೀರ್ಘ ದೂರುಗಳ ಬೆನ್ನತ್ತಿದ ಅಧಿಕಾರಿಗಳು ಅಂತಿಮವಾಗಿ ಪ್ರಕರಣ ನಡೆದು 9 ತಿಂಗಳ ನಂತರ ಈ ಶಿಸ್ತುಕ್ರಮ ಜರುಗಿಸಿದ್ದಾರೆ.
ಸೇವಾ ನಿಯಮಾವಳಿಗಳ ಉಲ್ಲಂಘನೆ!
ಯಾದಗಿರಿ ಡಿಡಿಪಿಐ (DDPI) ಚನ್ನಬಸಪ್ಪ ಮುಧೋಳ ಅವರು ಹೊರಡಿಸಿರುವ ಆದೇಶದ ಪ್ರಕಾರ, ಸರ್ಕಾರಿ ನೌಕರರು ಯಾವುದೇ ರಾಜಕೀಯ ಅಥವಾ ಧಾರ್ಮಿಕ ಸಂಘಟನೆಗಳ ಸಾರ್ವಜನಿಕ ಮೆರವಣಿಗೆ ಹಾಗೂ ಸಕ್ರಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ.
ಇದನ್ನೂ ಓದಿ: ಇಸ್ಲಾಂ ಧರ್ಮಕ್ಕೆ ಮತಾಂತರ? ಕೊನೆಗೂ ಮೌನ ಮುರಿದ ಕಾರ್ಲೋಸ್!
ಇಲಾಖೆಯ ಅನುಮತಿಯಿಲ್ಲದೆ ಇಂತಹ ಸಾರ್ವಜನಿಕ ಪಥಸಂಚಲನದಲ್ಲಿ ಭಾಗಿಯಾಗಿರುವುದು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಪರಿಗಣಿಸಿ ಇಬ್ಬರನ್ನೂ ಅಮಾನತು ಮಾಡಲಾಗಿದೆ.