Aryavir Sehwag - Anvay Dravid
ಭಾರತೀಯ ಕ್ರಿಕೆಟ್‌ನ ಇಬ್ಬರು ದಿಗ್ಗಜರಾದ ವೀರೇಂದ್ರ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಅವರ ಪುತ್ರರು ಜಂಟಿಯಾಗಿ ಭಾರತ ತಂಡವನ್ನು ಪ್ರತಿನಿಧಿಸುವ ಕಾಲ ಸನ್ನಿಹಿತವಾಗಿದೆ. ಆಸ್ಟ್ರೇಲಿಯಾ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ತವರು ಸರಣಿಗಾಗಿ ಪ್ರಕಟಿಸಲಾದ ಭಾರತ ಅಂಡರ್-19 ಏಕದಿನ ತಂಡದಲ್ಲಿ ಆರ್ಯವೀರ್ ಸೆಹ್ವಾಗ್ ಮತ್ತು ಅನ್ವಯ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಗಸ್ಟ್ 27 ರಂದು ಈ ಸರಣಿಗಾಗಿ 15 ಸದಸ್ಯರ ಏಕದಿನ ತಂಡವನ್ನು ಪ್ರಕಟಿಸಿದೆ. ಲಕ್ಷ್ಯ ರೈ ಚಂದಾನಿ ತಂಡವನ್ನು ಮುನ್ನಡೆಸಲಿದ್ದು, ಯಶ್‌ಬರ್ಧನ್ ಚೌಹಾಣ್ ಉಪನಾಯಕರಾಗಲಿದ್ದಾರೆ.
ಆರ್ಯವೀರ್ ಸೆಹ್ವಾಗ್‌ಗೆ ಚೊಚ್ಚಲ ಅವಕಾಶ:
ವೀರೇಂದ್ರ ಸೆಹ್ವಾಗ್ ಅವರ ಹಿರಿಯ ಪುತ್ರ, 18 ವರ್ಷದ ಆರ್ಯವೀರ್ ಸೆಹ್ವಾಗ್ ಇದೇ ಮೊದಲ ಬಾರಿಗೆ ಭಾರತ U-19 ತಂಡಕ್ಕೆ ಆಯ್ಕೆಯಾಗಿದ್ದಾರೆ. ಬಲಗೈ ಬ್ಯಾಟರ್ ಆಗಿರುವ ಆರ್ಯವೀರ್ ಸದ್ಯ ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ವೆಸ್ಟ್ ಡೆಲ್ಲಿ ಲಯನ್ಸ್ ತಂಡದ ಪರ ಆಡುತ್ತಿದ್ದಾರೆ. ಈ ಹಿಂದೆ ಕೂಚ್ ಬೆಹಾರ್ ಟ್ರೋಫಿಯಲ್ಲಿ 297 ರನ್ ಬಾರಿಸಿ ಅವರು ಬಿಸಿಸಿಐ ಸೆಲೆಕ್ಟರ್‌ಗಳ ಗಮನ ಸೆಳೆದಿದ್ದರು. ತಂದೆಯಂತೆಯೇ ಸ್ಫೋಟಕ ಬ್ಯಾಟಿಂಗ್ ಶೈಲಿಗೆ ಇವರು ಹೆಸರಾಗಿದ್ದಾರೆ.
ವಿಕೆಟ್ ಕೀಪರ್ ಆಗಿ ಅನ್ವಯ್ ದ್ರಾವಿಡ್:
ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ, 17 ವರ್ಷದ ಅನ್ವಯ್ ದ್ರಾವಿಡ್ ವಿಕೆಟ್ ಕೀಪರ್-ಬ್ಯಾಟರ್ ಆಗಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ನಡೆದ ಶ್ರೀಲಂಕಾ ಪ್ರವಾಸದಲ್ಲಿ ಕಿರಿಯರ ತಂಡಕ್ಕೆ ಆಯ್ಕೆಯಾಗಿದ್ದ ಅನ್ವಯ್, ಯೂತ್ ಒನ್‌ಡೇ ಪಂದ್ಯದಲ್ಲಿ ಕೇವಲ 67 ಎಸೆತಗಳಲ್ಲಿ 87 ರನ್ ಚಚ್ಚಿ ಅಬ್ಬರಿಸಿದ್ದರು.
ಸರಣಿಯ ವೇಳಾಪಟ್ಟಿ:
ಸೆಪ್ಟೆಂಬರ್ 18 ರಿಂದ ಭಾರತ ಮತ್ತು ಆಸ್ಟ್ರೇಲಿಯಾ U-19 ತಂಡಗಳ ನಡುವೆ ಸರಣಿ ಆರಂಭವಾಗಲಿದೆ. ಈ ಪ್ರವಾಸದಲ್ಲಿ 3 ಏಕದಿನ ಪಂದ್ಯಗಳು ಮತ್ತು 2 ನಾಲ್ಕು ದಿನಗಳ (ಮಲ್ಟಿ-ಡೇ) ಪಂದ್ಯಗಳು ನಡೆಯಲಿವೆ. ಸೆಹ್ವಾಗ್ ಮತ್ತು ದ್ರಾವಿಡ್ ಪುತ್ರರು ಕೇವಲ ಏಕದಿನ ಸರಣಿಗೆ ಮಾತ್ರ ಆಯ್ಕೆಯಾಗಿದ್ದಾರೆ.
- ಸೆಪ್ಟೆಂಬರ್ 18: ಮೊದಲ ಏಕದಿನ ಪಂದ್ಯ (ರಾಜ್‌ಕೋಟ್)
- ಸೆಪ್ಟೆಂಬರ್ 21: ಎರಡನೇ ಏಕದಿನ ಪಂದ್ಯ (ರಾಜ್‌ಕೋಟ್)
- ಸೆಪ್ಟೆಂಬರ್ 23: ಮೂರನೇ ಏಕದಿನ ಪಂದ್ಯ (ರಾಜ್‌ಕೋಟ್)
ಇದನ್ನೂ ಓದಿ: RSS ಪಥಸಂಚಲನದಲ್ಲಿ ಭಾಗಿ: ಇಬ್ಬರು ಸರ್ಕಾರಿ ಶಿಕ್ಷಕರು ಅಮಾನತು
ಭಾರತ U19 ತಂಡ: ಲಕ್ಷ್ಯ ರೈ ಚಂದಾನಿ (ನಾಯಕ), ಯಶಬರ್ಧನ್ ಚೌಹಾಣ್ (ಉಪನಾಯಕ), ರಜತ್ ಬಾಘೆಲ್ (ವಿಕೆಟ್ ಕೀಪರ್), ಆರ್ಯವೀರ್ ಸೆಹ್ವಾಗ್, ವಿ.ಕೆ. ವಿನೀತ್, ಕುಶಾಗ್ರ ಓಜಾ, ಅರ್ಜುನ್ ರಜಪೂತ್, ಮನಲ್ ಚೌಹಾಣ್, ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ವಿ. ಯಶ್ವೀರ್, ರೋಹಿತ್ ಯಾದವ್, ಶವಿನ್ ವಿನೋದ್, ಮೋಹಿತ್ ಉಲ್ವಾ, ಚಿಗುರುಪತಿ ವೆಂಕಟ, ಕಾವ್ಯಾ ಪಟೇಲ್.