Eid Milad Clash
ಬೆಂಗಳೂರಿನ ಬಸವನಗುಡಿಯ ಕೆ.ಆರ್. ರಸ್ತೆಯಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯ ವೇಳೆ ಎರಡು ಗುಂಪುಗಳ ನಡುವೆ ಭೀಕರ ಘರ್ಷಣೆ ಸಂಭವಿಸಿತ್ತು. ಕೋಮು ಸೌಹಾರ್ದತೆಗೆ ಧಕ್ಕೆ ತಂದ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡಿದ ಆರೋಪದಡಿ ಹಿಂದೂ ಪರ ಸಂಘಟನೆಯ ಪುನೀತ್ ಕೆರೆಹಳ್ಳಿ ಸೇರಿದಂತೆ ಒಟ್ಟು ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್ಐಆರ್ಗಳು (FIR) ದಾಖಲಾಗಿವೆ. ಆದರೆ ಈ ಜಗಳಕ್ಕೆ ಅಸಲಿ ಕಾರಣವೇನು? ಯಾರು ಶುರು ಮಾಡಿದ್ದು ಎಂಬ ಇದೀಗ ಬೆಳಕಿಗೆ ಬಂದಿದೆ.
ಘಟನೆಗೆ ಕಾರಣವೇನು? ಎರಡು ಭಿನ್ನ ವಾದಗಳು
ಮೆರವಣಿಗೆಯ ವೇಳೆ ಜಗಳ ಆರಂಭವಾಗಿದ್ದು ಹೇಗೆ ಮತ್ತು ಯಾರು ಮೊದಲು ಪ್ರಚೋದನೆ ನೀಡಿದರು ಎಂಬ ಬಗ್ಗೆ ಸದ್ಯ ಪರ-ವಿರೋಧದ ಚರ್ಚೆಗಳು ಹಾಗೂ ವಾದಗಳು ಕೇಳಿಬರುತ್ತಿವೆ.
ಮೆರವಣಿಗೆಯಲ್ಲಿದ್ದವರ ಆರೋಪ: ಈದ್ ಮಿಲಾದ್ ಮೆರವಣಿಗೆಯು ಬಸವನಗುಡಿಯ ಗ್ಯಾರೇಜ್ ಅಪಾರ್ಟ್ಮೆಂಟ್ ಬಳಿ ಸಾಗುತ್ತಿದ್ದಾಗ, ಪುನೀತ್ ಕೆರೆಹಳ್ಳಿ ಮತ್ತು ಅವರ ರಾಷ್ಟ್ರ ರಕ್ಷಣಾ ಪಡೆಯ ಸಹಚರರು ಯಾವುದೇ ಪ್ರಚೋದನೆ ಇಲ್ಲದೆ ದಾರಿಗೆ ಅಡ್ಡ ಬಂದರು. ಕೇಸರಿ ಧ್ವಜ ಪ್ರದರ್ಶಿಸಿ, ಘೋಷಣೆಗಳನ್ನು ಕೂಗುವ ಮೂಲಕ, ನಮ್ಮ ಮೆರವಣಿಗೆಯನ್ನು ತಡೆಯಲು ಯತ್ನಿಸಿ ಜಗಳ ಆರಂಭಿಸಿದರು ಎಂದು ಅಬ್ದುಲ್ ರಜಾಕ್ ಖಾನ್ ಎಂಬುವವರು ದೂರು ನೀಡಿದ್ದಾರೆ.
ಪುನೀತ್ ಕೆರೆಹಳ್ಳಿ ತಂಡದ ಪ್ರತಿವಾದ: ಇನ್ನೊಂದೆಡೆ, ಮೆರವಣಿಗೆಯಲ್ಲಿದ್ದ ಕೆಲವರು ಪುನೀತ್ ಕೆರೆಹಳ್ಳಿ ಅವರ ಕಚೇರಿ ಬಳಿ ಬಂದಾಗ ಉದ್ದೇಶಪೂರ್ವಕವಾಗಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದರು. ಇದನ್ನು ಪ್ರಶ್ನಿಸಿದಾಗ ತಮ್ಮ ತಂಡದ ಮುರಳಿ ಎಂಬ ಯುವಕನ ಮೇಲೆ ಭೀಕರವಾಗಿ ಹಲ್ಲೆ ನಡೆಸಲಾಯಿತು ಎಂದು ಅವರ ಬೆಂಬಲಿಗರು ವಾದಿಸುತ್ತಿದ್ದಾರೆ.
ರಸ್ತೆ ತಡೆ ಪ್ರತಿಭಟನೆ ಮತ್ತು ಲಾಠಿ ಚಾರ್ಜ್:
ಗಲಾಟೆಯ ಸಂದರ್ಭದಲ್ಲಿ ತಲೆಗೆ ತೀವ್ರ ಗಾಯಗೊಂಡ ಮುರಳಿ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸುವ ಬದಲು, ಪುನೀತ್ ಕೆರೆಹಳ್ಳಿ ಮತ್ತು ತಂಡದವರು ಗಾಯಾಳುವನ್ನು ರಸ್ತೆಯಲ್ಲೇ ಕೂರಿಸಿ ಪ್ರತಿಭಟನೆ ನಡೆಸಿದರು. ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡ್ಡಿಪಡಿಸಿ, ಘೋಷಣೆಗಳನ್ನು ಕೂಗಲಾರಂಭಿಸಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು, ಸಾರ್ವಜನಿಕರ ರಕ್ಷಣೆಗಾಗಿ ಲಘು ಲಾಠಿ ಪ್ರದರ್ಶನ ನಡೆಸಿ ಜನರನ್ನು ಚದುರಿಸಿದರು.
ಗಲಾಟೆ ಶುರುವಾಗಿದ್ದು ಹೇಗೆ?
ಬಸವನಗುಡಿಯ ಕೆ.ಆರ್. ರಸ್ತೆಯಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯ ಗಲಾಟೆಗೆ ಸಂಬಂಧಿಸಿದಂತೆ ಇದೀಗ ಹೊಸದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಲಭ್ಯವಿರುವ ವಿಡಿಯೋ ತುಣುಕುಗಳ ಪ್ರಕಾರ, ಪುನೀತ್ ಕೆರೆಹಳ್ಳಿ ಗ್ಯಾಂಗ್ನ ಸದಸ್ಯ ಮುರಳಿ ಎಂಬಾತ ಮಿಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕನಿಗೆ ಕಾಲಿನಿಂದ ಒದೆಯುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಈ ರೀತಿ ಕೆರೆಹಳ್ಳಿ ಬೆಂಬಲಿಗರು ಕಾಲ್ಕೆರೆದು ಜಗಳಕ್ಕೆ ನಿಂತು, ಮೆರವಣಿಗೆಯಲ್ಲಿದ್ದವರ ಮೇಲೆ ಹಲ್ಲೆ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಅಲ್ಲಿದ್ದ ಉದ್ರಿಕ್ತ ಗುಂಪು ತಿರುಗಿಬಿದ್ದು ಮುರಳಿ ಮೇಲೆ ಪ್ರತಿ ದಾಳಿ ನಡೆಸಿದೆ. ಮೇಲ್ನೋಟಕ್ಕೆ ಪುನೀತ್ ಕೆರೆಹಳ್ಳಿ ಮತ್ತು ಅವರ ಸಹಚರರೇ ಶಾಂತಿಯುತ ಮೆರವಣಿಗೆಗೆ ಅಡ್ಡಿಪಡಿಸಿ ಗಲಾಟೆ ಆರಂಭಿಸಿದ್ದಾರೆ ಎಂಬುದಕ್ಕೆ ಈ ವಿಡಿಯೋ ಪ್ರಮುಖ ಸಾಕ್ಷಿಯಾಗಿದೆ ಎಂಬ ವಾದಗಳು ಕೇಳಿಬರುತ್ತಿವೆ.
ಘಟನೆಯ ತೀವ್ರತೆಯನ್ನು ಪರಿಗಣಿಸಿರುವ ಬೆಂಗಳೂರು ನಗರ ಪೊಲೀಸರು, ಸದ್ಯ ವೈರಲ್ ಆಗಿರುವ ಮೊಬೈಲ್ ವಿಡಿಯೋಗಳು ಮತ್ತು ಘಟನಾ ಸ್ಥಳದ ಸುತ್ತಮುತ್ತಲಿರುವ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಅಧಿಕೃತವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆಯೇ ತನಿಖೆ ಮುಂದುವರಿದಿದ್ದು, ಗಲಾಟೆಯ ಅಸಲಿ ಸತ್ಯಾಸತ್ಯತೆಯನ್ನು ಹೊರತರಲು ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾಗೆ ಸೆಹ್ವಾಗ್, ದ್ರಾವಿಡ್ ಪುತ್ರರ ಎಂಟ್ರಿ
ಒಟ್ಟಾರೆಯಾಗಿ ಹೇಳುವುದಾದರೆ, ಸರ್ವ ಜನಾಂಗದ ಶಾಂತಿಯ ತೋಟ ಎಂದೇ ಹೆಸರಾಗಿರುವ ಕರ್ನಾಟಕದಲ್ಲಿ ಇಂತಹ ಅಹಿತಕರ ಘಟನೆಗಳು ಮರುಕಳಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಕದಡಲು ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರಲು ಯತ್ನಿಸುವ ಯಾವುದೇ ಶಕ್ತಿಗಳ ವಿರುದ್ಧ ಕಾನೂನು ಕಠಿಣವಾಗಿ ವರ್ತಿಸಬೇಕಿದೆ.
ಸಮಾಜದಲ್ಲಿ ದ್ವೇಷ ಬಿತ್ತಿ, ಕಾನೂನನ್ನು ಕೈಗೆತ್ತಿಕೊಳ್ಳುವ ಇಂತಹ ಕಿಡಿಗೇಡಿಗಳನ್ನು ಯಾವುದೇ ರಾಜಕೀಯ ಅಥವಾ ಸದ್ದಿಲ್ಲದ ಬೆಂಬಲವಿಲ್ಲದೆ ಮಟ್ಟಹಾಕಿದಾಗ ಮಾತ್ರ ರಾಜ್ಯದ ಶಾಂತಿ ಸುವ್ಯವಸ್ಥೆಯನ್ನು ಉಳಿಸಲು ಸಾಧ್ಯ. ಪೊಲೀಸರು ಈ ಪ್ರಕರಣದ ಸಿಸಿಟಿವಿ ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಸಮಾಜದ ಶಾಂತಿ ಹಾಳುಗೆಡವಲು ಯತ್ನಿಸಿದ ಅಸಲಿ ತಪ್ಪಿತಸ್ಥರಿಗೆ ಕಾನೂನಿನ ಅಡಿಯಲ್ಲಿ ತಕ್ಕ ಶಿಕ್ಷೆ ಕೊಡಿಸಬೇಕಿದೆ.
ಜಿಯೋ ಕನ್ನಡ ನ್ಯೂಸ್ನ ವಾಟ್ಸ್ಆ್ಯಪ್ ಗ್ರೂಪ್ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.