ದೂರದ ದೇಶದಲ್ಲಿ ನೆಲೆಸಿದ್ದರೂ ಹುಟ್ಟೂರಿನ ಹಬ್ಬದ ನೆನಪಿನಲ್ಲಿ ಒಟ್ಟಾಗಿ ಓಣಂ ಆಚರಿಸಿ, ಸಿನಿಮಾ ನೋಡಿ ಸಂಭ್ರಮಿಸಿದ್ದ ಆ ಮೂವರು ಸ್ನೇಹಿತೆಯರ ನಡುವೆ ಕೆಲವೇ ಗಂಟೆಗಳಲ್ಲಿ ಇಂತಹದ್ದೊಂದು ಭೀಕರ ದುರಂತ ಸಂಭವಿಸಬಹುದು ಎಂದು ಯಾರೂ ಊಹಿಸಿರಲಿಲ್ಲ. ಅಮೆರಿಕದ ಕ್ಯಾಲಿಫೋರ್ನಿಯಾದ ಮಿಲ್ಪಿಟಾಸ್‌ನಲ್ಲಿರುವ ‘ಮಿಲ್ ಕ್ರೀಕ್ ಅಪಾರ್ಟ್‌ಮೆಂಟ್ಸ್’ ಸಂಕೀರ್ಣದಲ್ಲಿ ಕೇರಳ ಮೂಲದ ಇಬ್ಬರು ಶಿಕ್ಷಕಿಯರಾದ ಅಂಜನಾ ಹರಿ (35) ಮತ್ತು ಆನ್ ಮೇರಿ ಮ್ಯಾಥ್ಯೂ (40) ಅವರ ನಿಗೂಢ ಕೊಲೆಯಾಗಿದ್ದು, ಇಡೀ ಅನಿವಾಸಿ ಭಾರತೀಯ ಸಮುದಾಯವನ್ನು ದಿಗ್ಭ್ರಮೆಗೊಳಿಸಿದೆ. ಈ ಅವಳಿ ಕೊಲೆಯ ಆರೋಪದ ಮೇಲೆ ಅವರದ್ದೇ ನಿಕಟ ಸ್ನೇಹಿತೆ ಅನಿಲಾ (32) ಎಂಬಾಕೆಯನ್ನು ಯುಎಸ್ ಪೊಲೀಸರು ಬಂಧಿಸಿದ್ದಾರೆ.
ಹಬ್ಬ ಮುಗಿದ ಮರುದಿನವೇ ಹತ್ಯೆ!
ವರದಿಗಳ ಪ್ರಕಾರ, ಮೃತರಾದ ಅಂಜನಾ, ಆನ್ ಮೇರಿ ಮತ್ತು ಆರೋಪಿ ಅನಿಲಾ ಮೂವರೂ ಆತ್ಮೀಯ ಸ್ನೇಹಿತರಾಗಿದ್ದರು. ಆಗಸ್ಟ್ 28ರ ಘಟನೆ ನಡೆಯುವ ಹಿಂದಿನ ದಿನವಷ್ಟೇ ಇವರೆಲ್ಲರೂ ಜೊತೆಯಾಗಿ ಓಣಂ ಹಬ್ಬವನ್ನು ಸಡಗರದಿಂದ ಆಚರಿಸಿದ್ದರು. ಆದರೆ ಮರುದಿನವೇ ಪರಿಸ್ಥಿತಿ ಸಂಪೂರ್ಣ ತಿರುವು ಪಡೆದುಕೊಂಡಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಆರೋಪಿ ಅನಿಲಾ ಮೊದಲು ಅಪಾರ್ಟ್‌ಮೆಂಟ್ ಒಳಗೆ ನುಗ್ಗಿ ಆನ್ ಮೇರಿ ಮ್ಯಾಥ್ಯೂ ಅವರನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಂದಿದ್ದಾಳೆ. ಆ ಬಳಿಕ ಮತ್ತೊಬ್ಬ ಗೆಳತಿ ಅಂಜನಾ ಅವರನ್ನು ಕೆಳಗೆ ಕರೆಯಿಸಿಕೊಂಡು, ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಪ್ರದೇಶದಲ್ಲಿ ತನ್ನ ಕಾರಿನಿಂದ ಬಲವಾಗಿ ಢಿಕ್ಕಿ ಹೊಡೆಸಿ (ಹಿಟ್ ಅಂಡ್ ರನ್) ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಅಂಜನಾ ಅವರ ಪತಿ ವಿಜೀಶ್ ಘಟನೆ ನಡೆದ ತಕ್ಷಣ ಆನ್ ಮೇರಿ ಅವರ ಪತಿ ಜೇಕಬ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಜೇಕಬ್ ತಕ್ಷಣ ಮನೆಗೆ ಧಾವಿಸಿದಾಗ ಆನ್ ಮೇರಿ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ.
ಕೊಲೆಯ ಹಿಂದಿನ ಕಾರಣವೇನು?
ಈ ಭೀಕರ ಹತ್ಯೆಯ ನಿಖರವಾದ ಕಾರಣ ಇನ್ನೂ ತನಿಖೆಯ ಹಂತದಲ್ಲಿದೆ. ಆದರೆ ಸ್ಥಳೀಯ ಮೂಲಗಳ ಪ್ರಕಾರ, ಉದ್ಯೋಗ ಮತ್ತು ವೀಸಾ ವಿಚಾರಕ್ಕೆ ಸಂಬಂಧಿಸಿದಂತೆ ಇವರ ನಡುವೆ ವಿವಾದವಿತ್ತು ಎನ್ನಲಾಗಿದೆ. ಆರೋಪಿ ಅನಿಲಾ ಇತ್ತೀಚೆಗೆ ಅಮೆರಿಕದಲ್ಲಿ ತನ್ನ ಕೆಲಸ ಕಳೆದುಕೊಂಡಿದ್ದರೆ, ಅದೇ ಸಮಯದಲ್ಲಿ ಆನ್ ಮೇರಿ ಅವರಿಗೆ ಹೊಸ ಉದ್ಯೋಗ ಮತ್ತು ವರ್ಕ್ ಪರ್ಮಿಟ್ ಲಭ್ಯವಾಗಿತ್ತು. ಇದೇ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಆದರೆ ಅಮೆರಿಕದ ಪೊಲೀಸರು ತನಿಖೆ ಮುಗಿದ ಬಳಿಕವೇ ಅಧಿಕೃತ ಕಾರಣ ಹೊರಬೀಳಬೇಕಿದೆ.
ಅನಾಥವಾದ ಹಸುಗೂಸುಗಳು!
ಅಂಜನಾ ಹರಿ: ತ್ರಿಶೂರ್ ಮೂಲದ ಅಂಜನಾ ಅವರು 2021 ರಲ್ಲಿ ಅಮೆರಿಕಕ್ಕೆ ತೆರಳಿದ್ದು, ಕ್ಯಾಲಿಫೋರ್ನಿಯಾದಲ್ಲಿ ಶಾಲಾ ಶಿಕ್ಷಕಿಯಾಗಿದ್ದರು. ಇವರಿಗೆ ಪತಿ ವಿಜೀಶ್ (ಸಾಫ್ಟ್‌ವೇರ್ ಎಂಜಿನಿಯರ್) ಹಾಗೂ 6 ವರ್ಷದ ಪುಟ್ಟ ಹೆಣ್ಣು ಮಗಳಿದ್ದಾಳೆ.
ಆನ್ ಮೇರಿ ಮ್ಯಾಥ್ಯೂ: ತಿರುವನಂತಪುರಂ ಮೂಲದ ಆನ್ ಮೇರಿ ಕಳೆದ 10 ವರ್ಷಗಳಿಂದ ಅಮೆರಿಕದಲ್ಲಿದ್ದು, ಕಂಪ್ಯೂಟರ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇವರು ಪತಿ ಜೇಕಬ್ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
ಇದನ್ನೂ ಓದಿ: ‘ಗೃಹಲಕ್ಷ್ಮಿ’ ಹಣ ಬರಬೇಕಿದ್ದರೆ ಈ ದಾಖಲೆಗಳು ನೀಡಲೇಬೇಕು!
ಭಾರತ ಸರ್ಕಾರದ ಮಧ್ಯಪ್ರವೇಶ:
ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಘಟನೆಯನ್ನು ಅಧಿಕೃತವಾಗಿ ‘ನರಹತ್ಯೆ’ ಎಂದು ಖಚಿತಪಡಿಸಿದೆ. ಕೇಂದ್ರ ಸಚಿವ ಸುರೇಶ್ ಗೋಪಿ ಹಾಗೂ ಕೇರಳದ ನಾಯಕರು ಈಗಾಗಲೇ ಮೃತರ ಕುಟುಂಬದವರೊಂದಿಗೆ ಮಾತನಾಡಿದ್ದಾರೆ. ತನಿಖೆಯ ಪ್ರಕ್ರಿಯೆಗಳ ನಡುವೆಯೇ ಮೃತದೇಹಗಳನ್ನು ಆದಷ್ಟು ಬೇಗ ಕೇರಳಕ್ಕೆ ಮರಳಿ ತರಲು ವಿದೇಶಾಂಗ ಸಚಿವಾಲಯದ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸ್ನೇಹದ ಮುಖವಾಡದ ಹಿಂದೆ ಅಡಗಿದ್ದ ಕ್ರೌರ್ಯಕ್ಕೆ ಇಬ್ಬರು ಪ್ರತಿಭಾವಂತ ಭಾರತೀಯ ಶಿಕ್ಷಕಿಯರು ಬಲಿಯಾಗಿರುವುದು ಮಾತ್ರ ಅತ್ಯಂತ ದುರದೃಷ್ಟಕರ ಸಂಗತಿ.