Roopa Reddy
ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಇಡೀ ದೇಶವೇ ತಲೆತಗ್ಗಿಸುವಂತಹ ಭೀಕರ ಮತ್ತು ಆಘಾತಕಾರಿ ಘಟನೆಯೊಂದು ನಡೆದಿದೆ. ಮೊಬೈಲ್ ಗೀಳು, ಐಷಾರಾಮಿ ಜೀವನದ ಹಂಬಲ ಮತ್ತು ಹಣದ ದುರಾಸೆಗೆ ಬಿದ್ದ ಹತ್ತನೇ ತರಗತಿಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು, ತಮಗೆ ವಿದ್ಯಾಬುದ್ಧಿ ಕಲಿಸುತ್ತಿದ್ದ ಸ್ವಂತ ಶಾಲೆಯ ಪ್ರಾಂಶುಪಾಲರನ್ನೇ ಬರೋಬ್ಬರಿ 27 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಕೊಂಡಮಲ್ಲೇಪಲ್ಲಿಯ ಖಾಸಗಿ ಶಾಲೆಯ ಪ್ರಾಂಶುಪಾಲರಾದ ಕಲ್ಲು ರೂಪಾ ರೆಡ್ಡಿ (49) ಕೊಲೆಯಾದ ದುರ್ದೈವಿ. ಈ ಕ್ರೂರ ಕೃತ್ಯ ಎಸಗಿದ ಇಬ್ಬರು 16 ವರ್ಷದ ಅಪ್ರಾಪ್ತ ವಿದ್ಯಾರ್ಥಿಗಳನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ.
ದ್ವೇಷ ಮತ್ತು ದರೋಡೆಯ ಮಾಸ್ಟರ್ ಪ್ಲಾನ್:
ಪೊಲೀಸ್ ತನಿಖೆಯ ಪ್ರಕಾರ, ಆರೋಪಿ ವಿದ್ಯಾರ್ಥಿಗಳಲ್ಲಿ ಒಬ್ಬನು ಈ ಹಿಂದೆ ಅದೇ ಶಾಲೆಯ ಹಾಸ್ಟೆಲ್‌ನಲ್ಲಿದ್ದಾಗ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದನು. ಈ ಹಿನ್ನೆಲೆಯಲ್ಲಿ ಪ್ರಾಂಶುಪಾಲೆ ರೂಪಾ ರೆಡ್ಡಿ ಆತನನ್ನು ಹಾಸ್ಟೆಲ್‌ನಿಂದ ಹೊರಹಾಕಿ, ಕೇವಲ ದಿನದ ವಿದ್ಯಾರ್ಥಿಯಾಗಿ ಶಾಲೆಗೆ ಬರುವಂತೆ ಶಿಸ್ತು ಕ್ರಮ ಜರುಗಿಸಿದ್ದರು. ಇದರಿಂದ ತೀವ್ರ ಆಕ್ರೋಶಗೊಂಡಿದ್ದ ವಿದ್ಯಾರ್ಥಿ, ಪ್ರಾಂಶುಪಾಲರ ಮೇಲೆ ದ್ವೇಷ ಸಾಧಿಸಲು ಮತ್ತು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದನು.
ಇದರ ನಡುವೆ, ಇಬ್ಬರೂ ವಿದ್ಯಾರ್ಥಿಗಳಿಗೆ ಐಷಾರಾಮಿ ಜೀವನ ನಡೆಸಲು ಮತ್ತು ಹೊಸ ಬೈಕ್ ಹಾಗೂ ಮೊಬೈಲ್ ಖರೀದಿಸಲು ದೊಡ್ಡ ಮೊತ್ತದ ಹಣದ ಅವಶ್ಯಕತೆಯಿತ್ತು. ಶಾಲೆಯ ಫೀಸ್ ಸಂಗ್ರಹದ ಲಕ್ಷಾಂತರ ರೂಪಾಯಿ ಹಣ ಪ್ರಾಂಶುಪಾಲರ ಮನೆಯಲ್ಲೇ ಇರಬಹುದೆಂದು ಊಹಿಸಿ, ಇಬ್ಬರೂ ಸೇರಿ ದರೋಡೆಗೆ ಸ್ಕೆಚ್ ಹಾಕಿದ್ದರು.
ಮನೆಗೆ ನುಗ್ಗಿ 27 ಬಾರಿ ಇರಿತ:
ಆಗಸ್ಟ್ 11 ರಂದು ಪ್ರಾಂಶುಪಾಲೆ ರೂಪಾ ರೆಡ್ಡಿ ಅವರು ಮನೆಯಲ್ಲಿ ಒಂಟಿಯಾಗಿದ್ದ ಸಮಯವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಕಳ್ಳತನ ಮಾಡಲು ಒಳ ನುಗ್ಗಿದ್ದಾರೆ. ಆದರೆ ಕಳ್ಳತನದ ಯತ್ನದ ವೇಳೆ ರೂಪಾ ರೆಡ್ಡಿ ಅವರು ವಿದ್ಯಾರ್ಥಿಯನ್ನು ಗುರುತಿಸಿದ್ದಾರೆ. ತಾವು ಸಿಕ್ಕಿಬೀಳುತ್ತೇವೆ ಮತ್ತು ಪೊಲೀಸ್ ಕೇಸ್ ಆಗುತ್ತದೆ ಎಂಬ ಭಯದಿಂದ ವಿದ್ಯಾರ್ಥಿಗಳು ತಕ್ಷಣವೇ ರೂಪಾ ರೆಡ್ಡಿ ಅವರ ಮೇಲೆ ಮುಗಿಬಿದ್ದಿದ್ದಾರೆ.
ಕ್ರೂರತೆಯ ಪರಮಾವಧಿ ತಲುಪಿದ ಅಪ್ರಾಪ್ತರು, ಚಾಕುವಿನಿಂದ ಅವರ ದೇಹದ ವಿವಿಧ ಭಾಗಗಳಿಗೆ ಬರೋಬ್ಬರಿ 27 ಬಾರಿ ಇರಿದು ಸ್ಥಳದಲ್ಲೇ ಕೊಂದಿದ್ದಾರೆ. ನಂತರ ಮನೆಯಲ್ಲಿದ್ದ ಸುಮಾರು 2 ಲಕ್ಷ ರೂಪಾಯಿ ನಗದು ಮತ್ತು ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ಕ್ಲೂ ನೀಡಿದ ಸಿಸಿಟಿವಿ!
ರೂಪಾ ರೆಡ್ಡಿ ಅವರ ಪತಿ ಹೈದರಾಬಾದ್‌ನಲ್ಲಿದ್ದು, ಪತ್ನಿ ಫೋನ್ ಸ್ವೀಕರಿಸದಿದ್ದಾಗ ನೆರೆಹೊರೆಯವರಿಗೆ ತಿಳಿಸಿದ್ದಾರೆ. ಆಗಸ್ಟ್ 12 ರ ಬೆಳಗ್ಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹ ಪತ್ತೆಯಾಗಿದೆ. ಘಟನೆಯ ಗಂಭೀರತೆ ಅರಿತ ನಲ್ಗೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶರತ್ ಚಂದ್ರ ಪವಾರ್ ನೇತೃತ್ವದಲ್ಲಿ 5 ವಿಶೇಷ ತಂಡಗಳನ್ನು ರಚಿಸಿ ತನಿಖೆ ಕೈಗೊಳ್ಳಲಾಯಿತು.
ಶಾಲೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳು, ಫಿಂಗರ್ ಪ್ರಿಂಟ್‌ಗಳು ಮತ್ತು ಸೈಬರ್ ಸೆಲ್ ತಾಂತ್ರಿಕ ಡೇಟಾವನ್ನು ಆಧರಿಸಿ ಪೊಲೀಸರು ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ರಕ್ತದ ಕಲೆಗಳಿದ್ದ ನಗದು ಮತ್ತು ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಕ್ರೈಮ್ ಸ್ಟೋರಿ… ಇವರು ಡ್ರಗ್ಸ್ ಟೀಚರ್ಸ್..!
ಸಮಾಜಕ್ಕೆ ಎಚ್ಚರಿಕೆಯ ಗಂಟೆ:
ಅಪ್ರಾಪ್ತ ವಯಸ್ಸಿನಲ್ಲೇ ವಿದ್ಯಾರ್ಥಿಗಳು ಈ ಮಟ್ಟದ ಕ್ರೌರ್ಯ ಹಾಗೂ ಅಪರಾಧ ಮನೋಭಾವ ಬೆಳೆಸಿಕೊಳ್ಳುತ್ತಿರುವುದು ಇಡೀ ಸಮಾಜ ಮತ್ತು ಶಿಕ್ಷಣ ವ್ಯವಸ್ಥೆಗೆ ಎಚ್ಚರಿಕೆಯ ಗಂಟೆಯಾಗಿದೆ. ಕೇವಲ ಹಣ ಮತ್ತು ಸುಖಭೋಗಕ್ಕಾಗಿ ಗುರುವನ್ನೇ ಕೊಲ್ಲುವ ಹಂತಕ್ಕೆ ತಲುಪಿರುವ ಇಂದಿನ ಪೀಳಿಗೆಯ ಮಾನಸಿಕತೆ ಸದ್ಯ ತೀವ್ರ ಕಳವಳಕ್ಕೆ ಕಾರಣವಾಗಿದೆ.