ಬಾಂಗ್ಲಾದೇಶ್ನ ರಾಜ್ಬಾರಿ ಜಿಲ್ಲೆಯ ದೌಲತ್ದಿಯಾ ಫೆರ್ರಿ ಘಾಟ್ ಬಳಿ ಬುಧವಾರ (ಮಾರ್ಚ್ 25, 2026) ಸಂಜೆ ಭೀಕರ ಬಸ್ ಅವಘಡ ಸಂಭವಿಸಿದೆ. ಈ ಅವಘಡದಿಂದಾಗಿ ಈವರೆಗೆ 24 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕುಷ್ಟಿಯಾದಿಂದ ಢಾಕಾಕ್ಕೆ ತೆರಳುತ್ತಿದ್ದ ‘ಸೌಹಾರ್ದ್ಯ ಪರಿಬಹನ್’ ಸಂಸ್ಥೆಯ ಬಸ್, ಫೆರ್ರಿ ಹತ್ತಲು ಪ್ರಯತ್ನಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಪದ್ಮಾ ನದಿಗೆ ಉರುಳಿದೆ. ಈವರೆಗೆ 24 ಶವಗಳನ್ನು ಹೊರತೆಗೆಯಲಾಗಿದ್ದು, ಇದರಲ್ಲಿ 11 ಮಹಿಳೆಯರು ಮತ್ತು 5 ಮಕ್ಕಳು ಸೇರಿದ್ದಾರೆ.
ನದಿಯ ಸುಮಾರು 30 ಅಡಿ ಆಳದಲ್ಲಿದ್ದ ಬಸ್ಸನ್ನು ‘ಹಮ್ಜಾ’ ಎಂಬ ಸಾಲ್ವೇಜ್ ಹಡಗಿನ ಸಹಾಯದಿಂದ ಮೇಲೆತ್ತಲಾಗಿದೆ. ಸುಮಾರು 11 ಜನರು ಈಜುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಪ್ರಾಥಮಿಕ ವರದಿಗಳ ಪ್ರಕಾರ, ಈ ದುರಂತಕ್ಕೆ ಬ್ರೇಕ್ ವೈಫಲ್ಯ ಅಥವಾ ಪಾಂಟೂನ್ (ತೇಲುವ ಸೇತುವೆ) ನಲ್ಲಾದ ತಾಂತ್ರಿಕ ದೋಷ ಕಾರಣವಿರಬಹುದು ಎಂದು ಶಂಕಿಸಲಾಗಿದೆ.