Exam
ಕರ್ನಾಟಕ ಸರ್ಕಾರವು ಎಸ್ಎಸ್ಎಲ್ಸಿ (SSLC) ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಇನ್ನು ಮುಂದೆ ಮೂರನೇ ಭಾಷೆಯಾದ ಹಿಂದಿ ವಿಷಯದ ಅಂಕಗಳನ್ನು ಒಟ್ಟು ಫಲಿತಾಂಶಕ್ಕೆ ಪರಿಗಣಿಸುವುದಿಲ್ಲ ಎಂದು ತಿಳಿಸಿದೆ. ಅಂದರೆ ಇನ್ಮುಂದೆ ಹಿಂದಿ ವಿಷಯದಲ್ಲಿ ವಿದ್ಯಾರ್ಥಿಗಳು ಫೇಲ್ ಆದರೂ, ಅವರು ಮುಂದಿನ ತರಗತಿಗೆ ತೇರ್ಗಡೆಯಾಗಲಿದ್ದಾರೆ.
SSLC ಪರೀಕ್ಷೆಯ ಪ್ರಮುಖ ಬದಲಾವಣೆಗಳು:
- ಗ್ರೇಡಿಂಗ್ ಪದ್ಧತಿ: ಹಿಂದಿ ವಿಷಯದಲ್ಲಿ ಇನ್ನು ಮುಂದೆ ಅಂಕಗಳ ಬದಲಿಗೆ ಎ, ಬಿ, ಸಿ ಅಥವಾ ಡಿ ಎಂಬ ಗ್ರೇಡ್ಗಳನ್ನು ನೀಡಲಾಗುತ್ತದೆ.
- ಒಟ್ಟು ಅಂಕಗಳ ಕಡಿತ: ಈ ಮೊದಲು ಒಟ್ಟು ಅಂಕಗಳು 625 ಇರುತ್ತಿತ್ತು. ಈಗ ಹಿಂದಿಯ 100 ಅಂಕಗಳನ್ನು ಹೊರಗಿಟ್ಟು, ಒಟ್ಟು ಅಂಕಗಳನ್ನು 525ಕ್ಕೆ ನಿಗದಿಪಡಿಸಲಾಗಿದೆ.
- ಹಾಜರಾತಿ ಕಡ್ಡಾಯ: ಅಂಕಗಳನ್ನು ಪರಿಗಣಿಸದಿದ್ದರೂ, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಾಗಿದೆ.
- ಪಾಸು-ಫೇಲು ಇಲ್ಲ: ಈ ವಿಷಯದಲ್ಲಿ ವಿದ್ಯಾರ್ಥಿಗಳನ್ನು ಪಾಸು ಅಥವಾ ಫೇಲು ಎಂದು ಘೋಷಿಸುವುದಿಲ್ಲ.
ಈ ಬದಲಾವಣೆಗೆ ಕಾರಣವೇನು?
ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡುವುದು: 2025ರ ಪರೀಕ್ಷೆಯಲ್ಲಿ ಸುಮಾರು 1.48 ಲಕ್ಷ ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ ಅನುತ್ತೀರ್ಣರಾಗಿದ್ದರು. ಇದರಿಂದಾಗಿ ವಿದ್ಯಾರ್ಥಿಗಳು ಎದುರಿಸುವ ಶೈಕ್ಷಣಿಕ ಒತ್ತಡ ಮತ್ತು “ಫೇಲಾಗುವ ಭೀತಿ”ಯನ್ನು ಹೋಗಲಾಡಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಹಿಂದಿ ಹೇರಿಕೆ ತಡೆಗಟ್ಟುವುದು: ರಾಜ್ಯದ ಹೆಚ್ಚಿನ ಶಾಲೆಗಳಲ್ಲಿ ಹಿಂದಿಯನ್ನೇ ತೃತೀಯ ಭಾಷೆಯಾಗಿ ನೀಡಲಾಗುತ್ತಿದ್ದು, ಇದು ಪರೋಕ್ಷವಾಗಿ ಭಾಷಾ ಹೇರಿಕೆಯಂತೆ ಭಾಸವಾಗುತ್ತಿದೆ ಎಂದು ಅನೇಕ ಕನ್ನಡಪರ ಸಂಘಟನೆಗಳು ಈ ಪದ್ಧತಿಯನ್ನು ವಿರೋಧಿಸಿ ಅಂಕಗಳನ್ನು ತೆಗೆದುಹಾಕಲು ಒತ್ತಾಯಿಸಿದ್ದವು.
ದ್ವಿಭಾಷಾ ಸೂತ್ರಕ್ಕೆ ಬೆಂಬಲ: ಈ ನಿರ್ಧಾರವು ರಾಜ್ಯ ಶಿಕ್ಷಣ ನೀತಿಯಲ್ಲಿ ಉದ್ದೇಶಿಸಲಾದ ದ್ವಿಭಾಷಾ ಸೂತ್ರಕ್ಕೆ ಪೂರಕವಾಗಿದೆ. ಇದು ಕನ್ನಡ ಭಾಷೆಯ ಬೆಳವಣಿಗೆಗೆ ಮತ್ತು ವಿದ್ಯಾರ್ಥಿಗಳ ಮೇಲಿನ ಹೊರೆ ತಗ್ಗಿಸಲು ಸಹಾಯ ಮಾಡುತ್ತದೆ ಎಂದು ಸರ್ಕಾರ ಪ್ರತಿಪಾದಿಸಿದೆ.
ಕೌಶಲ್ಯ ಆಧಾರಿತ ಕಲಿಕೆ: ಅಂಕಗಳ ಬೆನ್ನತ್ತದೆ ಭಾಷೆಯನ್ನು ಒಂದು ಕೌಶಲ್ಯವಾಗಿ ಕಲಿಯಲು ಪ್ರೇರೇಪಿಸುವುದು ಮತ್ತು ಮುಖ್ಯ ವಿಷಯಗಳ (ಕೋರ್ ಸಬ್ಜೆಕ್ಟ್) ಕಡೆಗೆ ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸಲು ಅನುವು ಮಾಡಿಕೊಡುವುದು ಇದರ ಉದ್ದೇಶವಾಗಿದೆ.
ಶೈಕ್ಷಣಿಕ ಸಮಾನತೆ: ತಮಿಳುನಾಡು ಸೇರಿದಂತೆ ಉತ್ತರ ಭಾರತದಲ್ಲಿ ದ್ವಿಭಾಷಾ ಶೈಕ್ಷಣಿಕ ವ್ಯವಸ್ಥೆಯಿದೆ. ಇದಾಗ್ಯೂ ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರವನ್ನು ಪರಿಚಯಿಸಲಾಗಿತ್ತು. ಈ ಮೂಲಕ ಹಿಂದಿ ಕಲಿಯುವುದು ಕಡ್ಡಾಯ ಮಾಡಲಾಗಿತ್ತು. ಇತ್ತ ದಕ್ಷಿಣ ಭಾರತೀಯರು ಮೂರನೇ ಭಾಷೆಯನ್ನಾಗಿ ಹಿಂದಿಯನ್ನು ಕಲಿಯುವುದು ಕಡ್ಡಾಯ ಮಾಡಿದರೂ, ಅತ್ತ ಉತ್ತರ ಭಾರತೀಯರು ದ್ವಿಭಾಷಾ ಸೂತ್ರದ (ಹಿಂದಿ+ಇಂಗ್ಲಿಷ್) ಮೂಲಕ ಐದು ವಿಷಯಗಳಲ್ಲಿ ಹೆಚ್ಚಿನ ಶೇಕಡಾವಾರು ಅಂಕಗಳನ್ನು ಗಳಿಸಲು ಅವಕಾಶವಿತ್ತು. ಇದೀಗ ಹಿಂದಿಯನ್ನು ಕಡ್ಡಾಯ ವಿಷಯದಿಂದ ಹೊರಗಿಡುವ ಮೂಲಕ ಕರ್ನಾಟಕ ಸರ್ಕಾರ ಶೈಕ್ಷಣಿಕ ಸಮಾನತೆ ತರಲು ಮುಂದಾಗಿದ್ದಾರೆ.
ಗ್ರೇಡ್ ನೀಡುವುದು ಹೇಗೆ?
- 80 ರಿಂದ 100 ಅಂಕಗಳನ್ನು ಪಡೆದರೆ- A ಗ್ರೇಡ್
- 60 ರಿಂದ 79 ಅಂಕಗಳನ್ನು ಪಡೆದರೆ- B ಗ್ರೇಡ್
- 40 ರಿಂದ 59 ಅಂಕಗಳನ್ನು ಪಡೆದರೆ- C ಗ್ರೇಡ್
- 35 ರಿಂದ 39 ಅಂಕಗಳನ್ನು ಪಡೆದರೆ- D ಗ್ರೇಡ್
- 35ಕ್ಕಿಂತ ಕಡಿಮೆ ಅಂಕಗಳನ್ನು ಪಡೆದರೆ- E ಗ್ರೇಡ್
ಇಲ್ಲಿ E ಗ್ರೇಡ್ ಪಡೆದ ವಿದ್ಯಾರ್ಥಿಯನ್ನು ಫೇಲ್ ಎಂದು ಪರಿಗಣಿಸಲಾಗುವುದಿಲ್ಲ. ಬದಲಾಗಿ ಮುಂದಿನ ತರಗತಿಯಲ್ಲಿ ಸುಧಾರಣೆ ಮಾಡಬೇಕೆಂದು ತಿಳಿಸಲಾಗುತ್ತದೆ.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ…!
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರಗಳು!ರಾಜ್ಯದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಒತ್ತಡವನ್ನು ತಗ್ಗಿಸಲು ಮತ್ತು ಪರೀಕ್ಷಾ ಭಯದಿಂದ ಮುಕ್ತಗೊಳಿಸಲು ನಮ್ಮ ಸರ್ಕಾರ ಇಂದು ಐತಿಹಾಸಿಕ ನಿರ್ಧಾರಗಳನ್ನು ಪ್ರಕಟಿಸಿದೆ
🖋 ತೃತೀಯ ಭಾಷೆ ಇನ್ಮುಂದೆ ‘ಗ್ರೇಡಿಂಗ್’… pic.twitter.com/Eoalh9zych
— Madhu Bangarappa (@Madhu_Bangarapp) March 27, 2026
ಅಂಕಗಳ ಲೆಕ್ಕಾಚಾರ:
- ಒಟ್ಟು ಅಂಕಗಳ ಲೆಕ್ಕಾಚಾರ: ಮೊದಲು ಎಸ್ಎಸ್ಎಲ್ಸಿ ಒಟ್ಟು ಅಂಕಗಳು 625 ಇರುತ್ತಿತ್ತು. ಈಗ ಈ 100 ಅಂಕಗಳನ್ನು ಹೊರತುಪಡಿಸಿ, ಕೇವಲ 525 ಅಂಕಗಳಿಗೆ ಮಾತ್ರ ನಿಮ್ಮ ಶೇಕಡಾವಾರು (Percentage) ಲೆಕ್ಕ ಹಾಕಲಾಗುತ್ತದೆ.
- ಫಲಿತಾಂಶದ ಮೇಲೆ ಪ್ರಭಾವ: ನೀವು ಹಿಂದಿಯಲ್ಲಿ ಕಡಿಮೆ ಅಂಕ ಪಡೆದರೂ ಅದು ನಿಮ್ಮ ಒಟ್ಟು ಪರ್ಸೆಂಟೇಜ್ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ.
- ಕನಿಷ್ಠ ಅಂಕದ ಅವಶ್ಯಕತೆ ಇಲ್ಲ: ಈ ವಿಷಯದಲ್ಲಿ ‘ಫೇಲು’ ಎಂಬ ಪದ ಇರುವುದಿಲ್ಲ. ಆದರೆ, ನೀವು ಪರೀಕ್ಷೆಗೆ ಹಾಜರಾಗಿ ಕನಿಷ್ಠ ಪಕ್ಷ ಪರೀಕ್ಷೆ ಬರೆಯುವುದು ಕಡ್ಡಾಯ.
ಇದನ್ನೂ ಓದಿ: ಈ ಸುದ್ದಿ ‘ಮದರ್ಲ್ಯಾಂಡ್-ಫಾದರ್ಲ್ಯಾಂಡ್’ ವಿಡಿಯೋ ನಂಬಿದವರಿಗೆ..!
ಈ ಹೊಸ ಬದಲಾವಣೆಯಿಂದಾಗಿ ವಿದ್ಯಾರ್ಥಿಗಳು ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನದಂತಹ ವಿಷಯಗಳ ಮೇಲೆ ಹೆಚ್ಚಿನ ಗಮನಹರಿಸಲು ಅವಕಾಶ ಸಿಗಲಿದೆ. ಅಂದರೆ ನಿರ್ದಿಷ್ಟ ವಿಷಯಗಳ ಕಲಿಕೆಗೆ ಹೆಚ್ಚು ಒತ್ತು ನೀಡುವ ಮೂಲಕ ಹೆಚ್ಚಿನ ಅಂಕಗಳನ್ನು ಪಡೆಯಲು ಅವಕಾಶ ದೊರೆಯಲಿದೆ.