ಕರ್ನಾಟಕದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆಯಾ? ಈ ಒಂದು ವರದಿಯನ್ನು ಮುಂದಿಟ್ಟರೆ ಖಂಡಿತ ಹೌದು ಎಂದೆನಿಸುತ್ತದೆ. ಏಕೆಂದರೆ ಇಲ್ಲಿ ಕಳ್ಳರದ್ದೇ ಮೇಲುಗೈ. ಅಂದರೆ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ದಾಖಲಾಗಿರುವ ವಾಹನ ಕಳವು, ಮನೆಗಳ್ಳತನ ಮತ್ತು ದರೋಡೆ, ಸುಲಿಗೆಗಳ ಪ್ರಕರಣಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಕಳ್ಳರ ಹಾವಳಿ ಹೆಚ್ಚಾಗಿರುವುದು ಸ್ಪಷ್ಟವಾಗುತ್ತದೆ. ಹೀಗೆ ಕಳ್ಳರ ಹಾವಳಿ ಹೆಚ್ಚಾಗಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಕಳ್ಳರನ್ನು ಹಿಡಿಯುವಲ್ಲಿ ಪೊಲೀಸರು ವಿಫಲರಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.
ರಾಜ್ಯದ ಬಹುತೇಕ ಠಾಣೆಯಲ್ಲೂ ಪ್ರತಿ ದಿನ ಒಂದಲ್ಲ ಒಂದು ಕಳ್ಳತನ ಪ್ರಕರಣಗಳು ದಾಖಲಾಗುತ್ತಿವೆ. ಇವುಗಳಲ್ಲಿ ಸಾಮಾನ್ಯ ಕಳ್ಳತನದ ಪ್ರಕರಣಗಳಿವೆ, ವಾಹನ ಕಳ್ಳತಗಳ ದೂರುಗಳಿವೆ. ಇನ್ನು ದರೋಡೆ, ಸುಲಿಗೆ ಪ್ರಕರಣಗಳು ಕಂಡು ಬರುತ್ತವೆ. ಆದರೆ ಇವುಗಳನ್ನು ಬೇಧಿಸುವಲ್ಲಿ ಕರ್ನಾಟಕ ಪೊಲೀಸರು ವಿಫಲರಾಗುತ್ತಿರುವುದೇ ಅಚ್ಚರಿ.
ಏಕೆಂದರೆ 2025 ರಲ್ಲಿ ಒಟ್ಟು 30,876 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಕಳೆದ ವರ್ಷ ಭೇದಿಸಿರುವುದು ಕೇವಲ 7236 ಕೇಸ್ಗಳು ಮಾತ್ರ ಎಂದರೆ ನಂಬಲೇಬೇಕು. ಅಂದರೆ 23 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.
ಒಂದು ವರ್ಷದಲ್ಲಿ 23 ಸಾವಿರಕ್ಕೂ ಅಧಿಕ ಪ್ರಕರಣಗಳು ಬಾಕಿ ಉಳಿದರೆ ಸಮಾಜದ ಗತಿಯೇನು ಎಂಬ ಪ್ರಶ್ನೆ ಮೂಡುವುದು ಸಹಜ. ಹೀಗಾಗಿಯೇ ಇದೀಗ ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳೆದ್ದಿವೆ.
ಬೆಂಗಳೂರಿನಲ್ಲೇ ಕಳ್ಳರ ಗ್ಯಾಂಗ್:
ಕರ್ನಾಟಕದಲ್ಲಿ ದಾಖಲಾಗುತ್ತಿರುವ ಕಳ್ಳತನ ಪ್ರಕರಣಗಳಲ್ಲಿ ಬಹುತೇಕ ಬೆಂಗಳೂರಿನಲ್ಲಿಯವು ಎಂಬುದು ವಿಶೇಷ. ಅಂದರೆ ಬೆಂಗಳೂರಿನಲ್ಲೇ ಹೆಚ್ಚು ಕಳ್ಳರು ಬೀಡು ಬಿಟ್ಟಿದ್ದಾರೆ. ಇದಕ್ಕೆ ಸಾಕ್ಷಿ ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿರುವ ಕೇಸ್ಗಳು.
2023 ರಲ್ಲಿ ಬೆಂಗಳೂರಿನ ದಾಖಲಾಗಿದ್ದ ಪ್ರಕರಣಗಳ ಸಂಖ್ಯೆ 45990. ಇದರಲ್ಲಿ ಪೊಲೀಸರು 17057 ಕೇಸ್ಗಳನ್ನು ಭೇದಿಸಿದ್ದಾರೆ.
2024 ರಲ್ಲಿ ಬೆಂಗಳೂರಿನಲ್ಲಿ 40628 ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 15815 ಪ್ರಕರಣಗಳನ್ನು ಭೇದಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ 2023 ರಲ್ಲಿ ಮತ್ತು 2024 ರಲ್ಲಿ 27,587 ಮತ್ತು 23,057 ಪ್ರಕರಣಗಳ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂಬುದು. ಅಂದರೆ 2 ವರ್ಷಗಳಲ್ಲಿ 50 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಂಗಳೂರಿನಲ್ಲೇ ಬಾಕಿ ಉಳಿದಿದ್ದವು.
ಇದೀಗ 2025 ರ ಒಟ್ಟು 30,876 ಕಳ್ಳತನ ಪ್ರಕರಣಗಳಲ್ಲಿ 23 ಸಾವಿರಕ್ಕೂ ಅಧಿಕ ಪ್ರಕರಣಗಳು ಬಾಕಿ ಉಳಿದಿವೆ. ಅಂದರೆ ಇಲ್ಲಿ ಪೊಲೀಸರಿಗಿಂತ ಕಳ್ಳರೇ ಚಾಣಾಕ್ಷತೆ ಮೆರೆಯುತ್ತಿರುವುದು ಸುಳ್ಳಲ್ಲ.
ಈ ಚಾಣಾಕ್ಷತೆಯನ್ನು ಮೀರಿ ಕರ್ನಾಟಕ ಪೊಲೀಸರು ಆದಷ್ಟು ಬೇಗ ಎಲ್ಲಾ ರೀತಿ ಕಳ್ಳರಿಗೆ ಕಡಿವಾಣ ಹಾಕಲಿ ಎಂದು ಆಶಿಸೋಣ.