SIR
SIR ಎಂದರೆ Special Intensive Revision (ವಿಶೇಷ ತೀವ್ರ ಪರಿಷ್ಕರಣೆ). ಇದು ಭಾರತದ ಚುನಾವಣಾ ಆಯೋಗವು (ECI) ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಶುದ್ಧೀಕರಿಸಲು, ನಕಲಿ ಅಥವಾ ಮೃತರ ಹೆಸರುಗಳನ್ನು ತೆಗೆದುಹಾಕಲು ಮತ್ತು ಅರ್ಹ ಮತದಾರರನ್ನು ದೃಢೀಕರಿಸಲು ಮನೆ-ಮನೆಗೆ ಭೇಟಿ ನೀಡಿ ನಡೆಸುವ ಬೃಹತ್ ಪರಿಶೀಲನಾ ಪ್ರಕ್ರಿಯೆಯಾಗಿದೆ.
ಕರ್ನಾಟಕದಲ್ಲಿ ಜೂನ್ 20, 2026 ರಿಂದ ಆರಂಭವಾಗಿರುವ ಈ SIR 2026 ಅಭಿಯಾನದ ಉದ್ದೇಶ, ಕಾಲಮಿತಿ, ಬೇಕಾಗುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವನ್ನು ಈ ಲೇಖನದಲ್ಲಿ ವಿವರವಾಗಿ ನೀಡಲಾಗಿದೆ.
SIR ಯಾಕೆ?
ನಕಲಿ ಮತದಾರರು, ಮೃತಪಟ್ಟವರು ಹಾಗೂ ಶಾಶ್ವತವಾಗಿ ಬೇರೆಡೆಗೆ ವಲಸೆ ಹೋದವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವುದು ಮತ್ತು ಹೊಸದಾಗಿ 18 ವರ್ಷ ತುಂಬಿದ ಯುವ ಜನರನ್ನು ಸೇರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಪ್ರೊಜೆನಿ ಮ್ಯಾಪಿಂಗ್’:
ಈ ಬಾರಿಯ SIR 2026 ರಲ್ಲಿ ಅತ್ಯಂತ ಕಟ್ಟುನಿಟ್ಟಾದ ನಿಯಮವೆಂದರೆ ‘ಪ್ರೊಜೆನಿ ಮ್ಯಾಪಿಂಗ್’. ನಿಮ್ಮ ವೋಟರ್ ಐಡಿಯನ್ನು ನಿಮ್ಮ ತಂದೆ, ತಾಯಿ ಅಥವಾ ಸಂಗಾತಿಯ ಮತದಾರರ ಚೀಟಿಯೊಂದಿಗೆ ಡಿಜಿಟಲ್ ಆಗಿ ಲಿಂಕ್ ಮಾಡಲಾಗುತ್ತದೆ. ಕುಟುಂಬದ ಲಿಂಕ್ ಸಿಗದ ಅಥವಾ ದಾಖಲೆಗಳಲ್ಲಿ ಹೊಂದಾಣಿಕೆ ಇಲ್ಲದ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇರುತ್ತದೆ.
ಕರ್ನಾಟಕ SIR 2026 ಅಧಿಕೃತ ವೇಳಾಪಟ್ಟಿ:
- ಜೂನ್ 20 ರಿಂದ ಜೂನ್ 27: ಪೂರ್ವಸಿದ್ಧತೆ, ಅಧಿಕಾರಿಗಳಿಗೆ ತರಬೇತಿ ಮತ್ತು ಫಾರಂಗಳ ಮುದ್ರಣ.
- ಜೂನ್ 30 ರಿಂದ ಜುಲೈ 29: ಬೂತ್ ಮಟ್ಟದ ಅಧಿಕಾರಿಗಳಿಂದ (BLOs) ಕಡ್ಡಾಯವಾಗಿ ಮನೆ-ಮನೆ ಭೇಟಿ ಮತ್ತು ಪರಿಶೀಲನೆ.
- ಆಗಸ್ಟ್ 5: ತಾತ್ಕಾಲಿಕ ಮತದಾರರ ಪಟ್ಟಿಯ ಪ್ರಕಟಣೆ.
- ಆಗಸ್ಟ್ 5 ರಿಂದ ಸೆಪ್ಟೆಂಬರ್ 4: ಆಕ್ಷೇಪಣೆಗಳು ಹಾಗೂ ಹೊಸ ಸೇರ್ಪಡೆ/ತಿದ್ದುಪಡಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ.
- ಸೆಪ್ಟೆಂಬರ್ 7: ಅಂತಿಮ ಮತದಾರರ ಪಟ್ಟಿ ಪ್ರಕಟಣೆ.
ಬೇಕಾಗುವ ಪ್ರಮುಖ ದಾಖಲೆಗಳು:
ಒಬ್ಬ ವ್ಯಕ್ತಿಯ ಹೆಸರು 2002ರ ಹಿಂದಿನ ಹಳೆಯ SIR ಪಟ್ಟಿಯಲ್ಲಿ ಕುಟುಂಬದವರೊಂದಿಗೆ ಲಿಂಕ್ ಆಗಿದ್ದರೆ ಕೇವಲ ಪರಿಗಣನೆ ಫಾರಂ ಭರ್ತಿ ಮಾಡಿಕೊಟ್ಟರೆ ಸಾಕು. ಇದರ ಜೊತೆಗೆ ಈ ಕೆಳಗಿನ ಯಾವುದಾದರೂ ಒಂದು ದಾಖಲೆಯನ್ನು ಇಟ್ಟುಕೊಳ್ಳಿ. ಆದರೆ ಹೊಸದಾಗಿ ಹೆಸರು ಸೇರಿಸಲು ಅಥವಾ ವಿವರಗಳನ್ನು ತಿದ್ದುಪಡಿ ಮಾಡಲು ಕೆಳಗಿನ ದಾಖಲೆಗಳು ಅನಿವಾರ್ಯ:
- ವಯಸ್ಸು ಮತ್ತು ಗುರುತಿನ ಪುರಾವೆ (ಯಾವುದಾದರೂ ಒಂದು):
- ಆಧಾರ್ ಕಾರ್ಡ್ (Aadhaar Card) – ಪ್ರಮುಖವಾಗಿ ಬೇಕಾಗುವ ದಾಖಲೆ.
- ಮತದಾರರ ಗುರುತಿನ ಚೀಟಿ (Voter ID)
- ಜನನ ಪ್ರಮಾಣ ಪತ್ರ (Birth Certificate)
- ಎಸ್.ಎಸ್.ಎಲ್.ಸಿ ಅಂಕಪಟ್ಟಿ.
- ಪ್ಯಾನ್ ಕಾರ್ಡ್ (PAN Card).
- ಡ್ರೈವಿಂಗ್ ಲೈಸೆನ್ಸ್
- ಭಾರತೀಯ ಪಾಸ್‌ಪೋರ್ಟ್.
ಇದನ್ನೂ ಓದಿ: ಬಿಜೆಪಿಯ ‘ಹಿಂದುತ್ವ’ ಅಸ್ತ್ರಕ್ಕೆ ಡಿಕೆಶಿ ಬ್ರೇಕ್!
- ಪ್ರಸ್ತುತ ವಾಸಸ್ಥಳದ ಪುರಾವೆ (ವಿಳಾಸ ಬದಲಾವಣೆ ಮಾಡಿಕೊಂಡವರಿಗೆ):
- ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಹಾಲಿ ಪಾಸ್‌ಬುಕ್.
- ರೇಷನ್ ಕಾರ್ಡ್ (Ration Card).
- ಇತ್ತೀಚಿನ ವಿದ್ಯುತ್ ಬಿಲ್ / ನೀರಿನ ಬಿಲ್ / ಗ್ಯಾಸ್ ಕನೆಕ್ಷನ್ ಬಿಲ್ (3 ತಿಂಗಳ ಒಳಗಿನದು).
- ನೋಂದಾಯಿತ ಬಾಡಿಗೆ ಒಪ್ಪಂದ ಪತ್ರ (ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ)
ಈ ಮೇಲಿನ ಎಲ್ಲಾ ದಾಖಲೆಗಳು ಇರಬೇಕಾದ ಅಗತ್ಯವಿಲ್ಲ. ಆಯಾ ವರ್ಗದಲ್ಲಿ ತಿಳಿಸಲಾದ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ನೀಡಿದರೆ ಸಾಕು. ಅಂದರೆ 2002ರ ಹಿಂದಿನ ಹಳೆಯ SIR ಪಟ್ಟಿಯಲ್ಲಿ ಕುಟುಂಬದವರೊಂದಿಗೆ ಲಿಂಕ್ ಆಗಿದ್ದರೆ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಇದ್ದರೆ ಸಾಕು.
ಇನ್ನು ಹೊಸದಾಗಿ ಹೆಸರು ಸೇರಿಸಲು ವಯಸ್ಸು ಮತ್ತು ಗುರುತಿನ ಪುರಾವೆ ಪಟ್ಟಿಯಲ್ಲಿ ನೀಡಲಾದ ಯಾವುದಾದರೂ ದಾಖಲೆ ಹೊಂದಿದ್ದರೆ ಸಾಕು. ಒಂದು ವೇಳೆ ನೀವು ವಿಳಾಸ ಬದಲಾವಣೆ ಮಾಡಿಕೊಂಡಿದ್ದರೆ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಹಾಲಿ ಪಾಸ್‌ಬುಕ್, ಇತ್ತೀಚಿನ ವಿದ್ಯುತ್ ಬಿಲ್ / ನೀರಿನ ಬಿಲ್ / ಗ್ಯಾಸ್ ಕನೆಕ್ಷನ್ ಬಿಲ್ ಅಥವಾ ನೋಂದಾಯಿತ ಬಾಡಿಗೆ ಒಪ್ಪಂದ ಪತ್ರವನ್ನು ಹೊಂದಿದ್ದರೆ ಸಾಕು.
ಮತ್ತೇನು ಬೇಕು?
- ಅರ್ಜಿದಾರರ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರ.
- ಮತದಾರರ ಗುರುತಿನ ಚೀಟಿ ಸಂಖ್ಯೆ (EPIC Number).
- ಕುಟುಂಬದ ಹಿರಿಯರ (ತಂದೆ/ತಾಯಿ/ಸಂಗಾತಿ) ವೋಟರ್ ಐಡಿ ಸಂಖ್ಯೆ (EPIC Number).
ಅರ್ಜಿ ಸಲ್ಲಿಸುವ ಮತ್ತು ಪರಿಶೀಲಿಸುವ ವಿಧಾನಗಳು:
ಜೂನ್ 30 ರಿಂದ ಜುಲೈ 29 ರ ಅವಧಿಯಲ್ಲಿ ನಿಮ್ಮ ಬೂತ್ ಮಟ್ಟದ ಅಧಿಕಾರಿ (BLO) ನಿಮ್ಮ ಮನೆಗೆ ಭೇಟಿ ನೀಡುತ್ತಾರೆ. ಅವರು ತರುವ ಭಾಗಶಃ ಭರ್ತಿಯಾದ Enumeration Form ಅನ್ನು ಪರಿಶೀಲಿಸಿ, ನಿಮ್ಮ ಸಹಿ ಅಥವಾ ಹೆಬ್ಬೆಟ್ಟಿನ ಗುರುತು ಹಾಕಬೇಕು. ಒಂದು ವೇಳೆ ಮತದಾರರು ಲಭ್ಯವಿಲ್ಲದಿದ್ದರೆ, ಕುಟುಂಬದ ಯಾವುದೇ ವಯಸ್ಕ ಸದಸ್ಯರು ಸಹಿ ಮಾಡಬಹುದು.
ವಿರೋಧ ವ್ಯಕ್ತಪಡಿಸುತ್ತಿರುವುದೇಕೆ?
ಭಾರತದ ಚುನಾವಣಾ ಆಯೋಗವು (ECI) ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಗೆ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು, ನಾಗರಿಕ ಹಕ್ಕುಗಳ ಹೋರಾಟಗಾರರು ಮತ್ತು ಸ್ವಯಂಸೇವಾ ಸಂಸ್ಥೆಗಳಿಂದ (NGOಗಳು) ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣಗಳು ಈ ಕೆಳಗಿನಂತಿದೆ….
- ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿ: ದೇಶಾದ್ಯಂತ ಈಗಾಗಲೇ 13ಕ್ಕೂ ಹೆಚ್ಚು ರಾಜ್ಯಗಳಲ್ಲಿ ನಡೆದಿರುವ SIR ಪ್ರಕ್ರಿಯೆಯಲ್ಲಿ ಸುಮಾರು 6.5 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಉದಾಹರಣೆಗೆ ಉತ್ತರ ಪ್ರದೇಶದಲ್ಲಿ 2.5 ಕೋಟಿ ಮತದಾರರನ್ನು ಕೈ ಬಿಡಲಾಗಿದೆ. ಹಾಗೆಯೇ ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಮತದಾರರ ಹೆಸರು ಲಿಸ್ಟ್ನಲ್ಲಿ ಕಾಣಿಸಿಕೊಂಡಿಲ್ಲ.
ಕರ್ನಾಟಕದಲ್ಲೂ ಮುಂಬರುವ ದಿನಗಳಲ್ಲಿ ವಲಸೆ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಸುಮಾರು 12% ಮತದಾರರು (ಅಂದರೆ ಲಕ್ಷಾಂತರ ಜನರು) ತಮ್ಮ ವೋಟರ್ ಐಡಿ ಕಳೆದುಕೊಳ್ಳಬಹುದು ಎಂದು ನಾಗರಿಕ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.
- ಪೋಷಕರ ಲಿಂಕ್ ಕಡ್ಡಾಯ: 2002 ಅಥವಾ 2003 ರ ನಂತರದ ಮತದಾರರು ತಮ್ಮ ಪೋಷಕರು ಅಥವಾ ಪೂರ್ವಜರ ವೋಟರ್ ಐಡಿ ಲಿಂಕ್ ಅನ್ನು ಕಡ್ಡಾಯವಾಗಿ ತೋರಿಸಬೇಕಾಗಿದೆ. ಇಲ್ಲಿ ಪೋಷಕರಿಂದ ದೂರವಾದವರಿಗೆ ಅಥವಾ ಪೋಷಕರು ಇಲ್ಲದವರಿಗೆ ಹೇಗೆ ನ್ಯಾಯ ಸಿಗುತ್ತದೆ. ಒಂದು ವೇಳೆ ಲಿಂಕ್ ಆಗದಿದ್ದರೆ ಸಮಸ್ಯೆ ಎದುರಾಗುತ್ತದೆ.
- ಬಡವರು ಮತ್ತು ವಲಸಿಗರಿಗೆ ಸಂಕಷ್ಟ: ಬಡವರು, ದಿನಗೂಲಿ ನೌಕರರು ಮತ್ತು ಕೆಲಸಕ್ಕಾಗಿ ಬೇರೆ ಜಿಲ್ಲೆ/ರಾಜ್ಯಗಳಿಗೆ ವಲಸೆ ಹೋದವರ ಬಳಿ ಹಳೆಯ ದಾಖಲೆಗಳು ಇರುವುದಿಲ್ಲ. ಇಂತಹ ಸಾಮಾನ್ಯ ಜನರನ್ನು “ಸಂಶಯಾಸ್ಪದ” ಮತದಾರರಂತೆ ನೋಡುವುದು ಮತ್ತು ಅವರ ಮೇಲೆಯೇ ದಾಖಲೆ ಒದಗಿಸುವ ಸಂಪೂರ್ಣ ಜವಾಬ್ದಾರಿ ಹಾಕಿರುವುದು ತಪ್ಪು ಎಂಬುದು ಪ್ರತಿಭಟನಾಕಾರರ ವಾದವಾಗಿದೆ.
- ಸಾಫ್ಟ್ವೇರ್ ಸಮಸ್ಯೆ: ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಪರಿಶೀಲಿಸಲು ಬಳಸುತ್ತಿರುವ ಸಾಫ್ಟ್‌ವೇರ್‌ನಲ್ಲಿ ಕೇವಲ ಹೆಸರಿನ ಸ್ಪೆಲ್ಲಿಂಗ್ ತಪ್ಪು (Spelling Mistakes) ಅಥವಾ ಕ್ಲೆರಿಕಲ್ ದೋಷಗಳಿದ್ದರೂ ಸಹ ಅದನ್ನು ನಕಲಿ ಮತದಾರ ಎಂದು ಗುರುತಿಸಿ ಹೆಸರು ರದ್ದುಗೊಳಿಸಲಾಗುತ್ತಿದೆ. ಯಾವುದೇ ಮುನ್ಸೂಚನೆ ಇಲ್ಲದೆ ತಾಂತ್ರಿಕ ಕಾರಣಗಳಿಗಾಗಿ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ವಿರೋಧಿಸಲಾಗಿದೆ.
- ನಿರ್ದಿಷ್ಠ ಸಮುದಾಯ/ವರ್ಗವನ್ನೇ ಟಾರ್ಗೆಟ್: ವಿರೋಧ ಪಕ್ಷಗಳು ಮತ್ತು ನಾಗರಿಕ ವೇದಿಕೆಗಳು (ಉದಾಹರಣೆಗೆ ಜಾಗೃತ ಕರ್ನಾಟಕ, PUCL) ಆರೋಪಿಸುವಂತೆ, ಈ ಪ್ರಕ್ರಿಯೆಯ ಮೂಲಕ ಮಹಿಳೆಯರು, ದಲಿತರು, ಹಿಂದುಳಿದ ವರ್ಗಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹೆಸರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಇದು ರಾಜಕೀಯ ಪ್ರೇರಿತ ಒಳಸಂಚು ಎಂದು ‘ಇಂಡಿಯಾ ಒಕ್ಕೂಟ’ ಸಂಸತ್ತಿನ ಒಳಗೂ ಮತ್ತು ಹೊರಗೂ ಪ್ರತಿಭಟಿಸಿದೆ.
- NRCಯ ಹೊಸ ರೂಪ: ವಿರೋಧ ಪಕ್ಷಗಳು ಈ ಪ್ರಕ್ರಿಯೆಯನ್ನು ರಾಷ್ಟ್ರೀಯ ನಾಗರಿಕ ನೋಂದಣಿ (NRC) ಪ್ರಕ್ರಿಯೆಗೆ ಹೋಲಿಸುತ್ತಿವೆ. ಚುನಾವಣಾ ಆಯೋಗವು ಕೇವಲ ವೋಟಿಂಗ್ ಅರ್ಹತೆಯನ್ನು ನೋಡಬೇಕೇ ಹೊರತು, ನಾಗರಿಕರ ಪೌರತ್ವವನ್ನು ತನಿಖೆ ಮಾಡುವ ಅಧಿಕಾರ ಅದಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಕೂಡ ಸಲ್ಲಿಕೆಯಾಗಿತ್ತು (ಆದರೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಆಯೋಗದ ಪರಿಷ್ಕರಣಾ ಅಧಿಕಾರವನ್ನು ಎತ್ತಿಹಿಡಿದಿದೆ).
ಇದನ್ನೂ ಓದಿ: ಆಹಾರ ವಾಹಿನಿ ಯೋಜನೆ: ಸರ್ಕಾರಿದಂದ ಸಿಗುತ್ತೆ 3 ಲಕ್ಷ ರೂ!
ಒಟ್ಟಾರೆಯಾಗಿ, ಮತದಾರರ ಪಟ್ಟಿಯನ್ನು “ಶುದ್ಧೀಕರಿಸುವ” ನೆಪದಲ್ಲಿ ಅರ್ಹ ನಾಗರಿಕರ ಪ್ರಜಾಪ್ರಭುತ್ವದ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ ಮತ್ತು ಇಡೀ ಪ್ರಕ್ರಿಯೆ ಅವೈಜ್ಞಾನಿಕವಾಗಿದೆ ಎಂಬ ಕಾರಣಕ್ಕಾಗಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದಾಗ್ಯೂ ಕರ್ನಾಟಕದಲ್ಲಿ SIR ನಡೆಸಲು ಚುನಾವಣಾ ಆಯೋಗ ಸಕಲ ರೀತಿಯಲ್ಲೂ ಸಜ್ಜಾಗಿದೆ.