PM Modi
ಇಂಡಿಯಾ ಮದರ್ಲ್ಯಾಂಡ್… ಇಸ್ರೇಲ್ ಫಾದರ್ಲ್ಯಾಂಡ್… ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ಹೇಳಿಕೆ ಇದು. ಈ ಹೇಳಿಕೆ ನೀಡಿದ್ದು ಮತ್ಯಾರೂ ಅಲ್ಲ, ಭಾರತದ ಪ್ರಧಾನಿ ನರೇಂದ್ರ ಮೋದಿ.
ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 25, 2026 ರಂದು ಇಸ್ರೇಲ್ ಸಂಸತ್ (ನೆಸೆಟ್) ಉದ್ದೇಶಿಸಿ ಮಾತನಾಡುತ್ತಾ ಈ ಹೇಳಿಕೆಯನ್ನು ನೀಡಿದ್ದರು. ಆದರೆ, ಈ ಹೇಳಿಕೆಯನ್ನು ಎಲ್ಲಾ ಭಾರತೀಯರಿಗೆ ಅನ್ವಯಿಸಿ ಹೇಳಿರಲಿಲ್ಲ ಎಂಬುದೇ ಸತ್ಯ.
ಯಾರ ಬಗ್ಗೆ ಹೇಳಿದ್ದು?
ಇಸ್ರೇಲ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಯಹೂದಿಗಳನ್ನು (Indian-origin Jews) ಉದ್ದೇಶಿಸಿ ಮೋದಿ ಈ ಮಾತುಗಳನ್ನು ಹೇಳಿದರು.
“ಇಸ್ರೇಲ್ ನಿಮ್ಮ ಪಿತೃಭೂಮಿ (Fatherland) ಮತ್ತು ಭಾರತ ನಿಮ್ಮ ಮಾತೃಭೂಮಿ (Motherland)” ಎಂದು ಅವರು ಹೇಳಿದ್ದರು. ಅಂದರೆ, ಇಸ್ರೇಲ್ ಅವರ ಧಾರ್ಮಿಕ ಮತ್ತು ಪೂರ್ವಜರ ಭೂಮಿಯಾಗಿದ್ದರೆ, ಭಾರತವು ಅವರಿಗೆ ಶತಮಾನಗಳ ಕಾಲ ಆಶ್ರಯ ನೀಡಿದ ತಾಯಿಯಂತಹ ನಾಡು ಎಂಬ ಅರ್ಥದಲ್ಲಿ ಈ ಹೇಳಿಕೆ ನೀಡಲಾಗಿತ್ತು.
ಈ ಹೇಳಿಕೆಗೆ ಕಾರಣವೇನು?
ಬೆನೆ ಇಸ್ರೇಲ್ ಮತ್ತು ಕೊಚ್ಚಿನ್ ಯಹೂದಿಗಳಂತಹ ಸಮುದಾಯಗಳು ಭಾರತದಿಂದ ಇಸ್ರೇಲ್‌ಗೆ ವಲಸೆ ಹೋಗಿ ಅಲ್ಲಿನ ಅಭಿವೃದ್ಧಿಯಲ್ಲಿ ದೊಡ್ಡ ಪಾತ್ರ ವಹಿಸಿರುವುದನ್ನು ಪ್ರಧಾನಿ ಶ್ಲಾಘಿಸುತ್ತಾ ಇಸ್ರೇಲ್ ನಿಮ್ಮ ಫಾದರ್ಲ್ಯಾಂಡ್, ಇಂಡಿಯಾ ನಿಮ್ಮ ಮದರ್ಲ್ಯಾಂಡ್ ಎಂದಿದ್ದರು.
ಈ ಭಾಷಣದ ಒಂದು ಸಣ್ಣ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಪ್ರಧಾನಿ ಮೋದಿ ಅವರು ಭಾರತೀಯರೆಲ್ಲರಿಗೂ ಇಸ್ರೇಲ್ ಪಿತೃಭೂಮಿ ಎಂದು ಹೇಳಿದ್ದಾರೆ ಎಂದು ಟ್ರೋಲ್ ಮಾಡಲಾಗಿತ್ತು.
ಆದರೆ ಪ್ರಧಾನಿ ಹೇಳಿದ್ದು ಭಾರತೀಯ ಮೂಲದ ಯಹೂದಿಗಳಿಗೆ. “ಇಸ್ರೇಲ್ ನಿಮ್ಮ ಪಿತೃಭೂಮಿ (ಧಾರ್ಮಿಕ ನೆಲೆ) ಮತ್ತು ಭಾರತ ನಿಮ್ಮ ಮಾತೃಭೂಮಿ (ಬೆಳೆಸಿದ ನಾಡು)” ಎಂದು ಹೇಳುವ ಮೂಲಕ ಅವರ ದ್ವಿಮುಖ ಗುರುತನ್ನು ಗೌರವಿಸಿದ್ದರು.
ಈ ವಿಡಿಯೋ ಕ್ಲಿಪ್ನ ಅರ್ಧಭಾಗವನ್ನು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗಿದೆ. ಹೀಗಾಗಿಯೇ ಈಗಲೂ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಇಂಡಿಯಾ ಮದರ್ಲ್ಯಾಂಡ್… ಇಸ್ರೇಲ್ ಫಾದರ್ಲ್ಯಾಂಡ್ ಎಂದು ಕಮೆಂಟಿಸುತ್ತಿದ್ದಾರೆ.
ಇದನ್ನೂ ಓದಿ: ಇಸ್ರೇಲ್ ಪ್ರಧಾನಿ ಬದುಕಿಲ್ವಾ? ಅನುಮಾನ ಹುಟ್ಟುಹಾಕಿದ ಹೊಸ ವಿಡಿಯೋ
ಆದರೆ ಪ್ರಧಾನಿ ಆ ಮಾತನ್ನು ಅಲ್ಲಿನ ಭಾರತೀಯ ಮೂಲದ ಯಹೂದಿಗಳಿಗೆ ಮಾತ್ರ ಉದ್ದೇಶಿಸಿ ಹೇಳಿದ್ದಾರೆಯೇ ಹೊರತು, ಭಾರತದಲ್ಲಿರುವ ೧೪೦ ಕೋಟಿ ಜನರಿಗಲ್ಲ ಎಂಬುದು ಗಮನಾರ್ಹ. ಇದಕ್ಕೆ ಸಾಕ್ಷಿ ಈ ಕೆಳಗೆ ನೀಡಲಾದ ವಿಡಿಯೋ (53ನೇ ನಿಮಿಷದಿಂದ ವೀಕ್ಷಿಸಿದರೆ ಸ್ಪಷ್ಟ ಮಾಹಿತಿ ಸಿಗುತ್ತದೆ).
ವಿಶೇಷ ಸೂಚನೆ: ಸಂಪೂರ್ಣ ಭಾಷಣ ಕೇಳಲು ಇಚ್ಛಿಸದವರು 53ನೇ ನಿಮಿಷದಿಂದ ನೋಡಿ ಇಂಡಿಯಾ ಮದರ್ಲ್ಯಾಂಡ್… ಇಸ್ರೇಲ್ ಫಾದರ್ಲ್ಯಾಂಡ್ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತದೆ)