Roberto Carlos
ಬ್ರೆಝಿಲ್ ಫುಟ್‌ಬಾಲ್ ತಂಡದ ಮಾಜಿ ಐಕಾನ್ ಮತ್ತು ರಿಯಲ್ ಮ್ಯಾಡ್ರಿಡ್ ದಂತಕಥೆ ರೊಬೆರ್ಟೊ ಕಾರ್ಲೋಸ್ (Roberto Carlos) ತಾವು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂಬ ವರದಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಈ ಸುದ್ದಿಯನ್ನು ಅವರು ಸಂಪೂರ್ಣವಾಗಿ “ಸುಳ್ಳು” ಎಂದು ಕರೆದಿದ್ದಾರೆ.
ಸೌದಿ ಅರೇಬಿಯಾದ ಪ್ರಸಿದ್ಧ ದಿನಪತ್ರಿಕೆ Okaz ಗೆ ನೀಡಿದ ವಿಶೇಷ ಸಂದರ್ಶನದಲ್ಲಿ 53 ವರ್ಷದ ಕಾರ್ಲೋಸ್ ಈ ವಿಷಯದ ಬಗ್ಗೆ ಮೊದಲ ಬಾರಿಗೆ ಅಧಿಕೃತವಾಗಿ ಮಾತನಾಡಿದ್ದಾರೆ.
ಧರ್ಮದ ಬಗ್ಗೆ ಗೌರವವಿದೆ, ಆದರೆ ಸುದ್ದಿ ನಿಜವಲ್ಲ!
ತಮ್ಮ ಧರ್ಮ ಬದಲಾವಣೆಯ ವದಂತಿಗಳನ್ನು ತಳ್ಳಿಹಾಕಿದ ಕಾರ್ಲೋಸ್, ಇಸ್ಲಾಂ ಧರ್ಮದ ಮೇಲಿನ ತಮ್ಮ ಗೌರವವನ್ನು ಈ ರೀತಿ ಹಂಚಿಕೊಂಡಿದ್ದಾರೆ:
“ನನಗೆ ಇಸ್ಲಾಂ ಧರ್ಮದ ಬಗ್ಗೆ ಅಪಾರ ಗೌರವವಿದೆ. ನನ್ನ ಪತ್ನಿ ಪ್ರಾರ್ಥನೆ ಮಾಡುವುದನ್ನು ನೋಡುವುದು ನನಗೆ ತುಂಬಾ ಸಂತೋಷ ತರುತ್ತದೆ. ಆದರೆ ನಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಎಂದು ಹರಡುತ್ತಿರುವ ವದಂತಿಗಳು ನಿಜವಲ್ಲ.”
ಈ ವದಂತಿ ಶುರುವಾಗಿದ್ದು ಹೇಗೆ?
ಕಾರ್ಲೋಸ್ ಇತ್ತೀಚೆಗೆ ಮೊರಾಕೊ ಮೂಲದ ಫುಟ್‌ಬಾಲ್ ಏಜೆಂಟ್ ಹಾಗೂ ಉದ್ಯಮಿ ಸೌಹೈಲಾ ಎಲ್ ತಾಹಿರಿ ಅವರನ್ನು ವಿವಾಹವಾದರು. ಮದುವೆಯ ಕೆಲವು ಖಾಸಗಿ ಚಿತ್ರಗಳು ಇಸ್ಲಾಮಿಕ್ ಸಂಪ್ರದಾಯದಂತೆ ಕಂಡುಬಂದಿದ್ದರಿಂದ ಜನರು ಅವರು ಮತಾಂತರಗೊಂಡಿದ್ದಾರೆ ಎಂದು ಭಾವಿಸಿದರು.
ಆದರೆ ಇದಕ್ಕೆ ಸ್ಪಷ್ಟನೆ ನೀಡಿದ ಕಾರ್ಲೋಸ್, “ನನ್ನ ಕುಟುಂಬದವರು ಕ್ಯಾಥೋಲಿಕ್ ಕ್ರಿಶ್ಚಿಯನ್ ಧರ್ಮದವರಾಗಿದ್ದು, ನನ್ನ ಪತ್ನಿಯ ಸ್ನೇಹಿತರು ಮತ್ತು ಕುಟುಂಬದವರು ಮುಸ್ಲಿಂ ಧರ್ಮದವರಾಗಿದ್ದಾರೆ. ಇಬ್ಬರ ನಂಬಿಕೆಗಳಿಗೂ ಗೌರವ ನೀಡಲು ನಾವು ಒಂದಕ್ಕಿಂತ ಹೆಚ್ಚು ಶೈಲಿಗಳಲ್ಲಿ ವಿವಾಹದ ಆಚರಣೆಗಳನ್ನು ಮಾಡಿದ್ದೆವು” ಎಂದು ತಿಳಿಸಿದ್ದಾರೆ.
ಟರ್ಕಿ ಸಂಸದರ ಟ್ವೀಟ್!
ಟರ್ಕಿಯ ಸಂಸದರೊಬ್ಬರು ಬ್ರೆಝಿಲ್‌ನ ಮುಸ್ಲಿಂ ಧರ್ಮಗುರುಗಳನ್ನು ಉಲ್ಲೇಖಿಸಿ, ಕಾರ್ಲೋಸ್ ನಾಲ್ಕು ವಾರಗಳ ಹಿಂದೆಯೇ ‘ಶಹಾದಾ’ (ಇಸ್ಲಾಂ ಧರ್ಮದ ಸ್ವೀಕಾರ) ಸ್ವೀಕರಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣವಾದಲ್ಲಿ ಬರೆದುಕೊಂಡಿದ್ದರು. ಇದು ಇಡೀ ವಿಶ್ವದಾದ್ಯಂತ ಈ ವದಂತಿ ವೇಗವಾಗಿ ಹರಡಲು ದೊಡ್ಡ ಕಾರಣವಾಗಿತ್ತು.
ಇದನ್ನೂ ಓದಿ: WTC ಫೈನಲ್ಗೇರಲು ಭಾರತ ತಂಡ ಇನ್ನೆಷ್ಟು ಪಂದ್ಯ ಗೆಲ್ಲಬೇಕು?
ವಿಶ್ವ ಫುಟ್‌ಬಾಲ್ ಇತಿಹಾಸದಲ್ಲೇ ಅತ್ಯುತ್ತಮ ಲೆಫ್ಟ್-ಬ್ಯಾಕ್ ಆಟಗಾರರಲ್ಲಿ ಒಬ್ಬರೆಂದು ಹೆಸರುವಾಸಿಯಾದ ಮತ್ತು 2002 ರ ವಿಶ್ವಕಪ್ ವಿಜೇತ ಬ್ರೆಝಿಲ್ ತಂಡದ ಪ್ರಮುಖ ಆಟಗಾರನಾಗಿದ್ದ ರೊಬೆರ್ಟೊ ಕಾರ್ಲೋಸ್, ಈಗ ಈ ಎಲ್ಲಾ ಚರ್ಚೆಗಳಿಗೆ ತಮ್ಮ ನೇರ ಹೇಳಿಕೆಯ ಮೂಲಕ ಪೂರ್ಣವಿರಾಮ ಇಟ್ಟಿದ್ದಾರೆ.