vaibhav suryavanshi
ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Suryavanshi) ಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ. ಈ ಶತಕದೊಂದಿಗೆ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ತನ್ನ 14ನೇ ವಯಸ್ಸಿನಲ್ಲಿ ಎಂಬುದು ವಿಶೇಷ. ಹರಾರೆಯಲ್ಲಿ ನಡೆದ ಅಂಡರ್-19 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಬ್ಯಾಟಿಂಗ್ನೊಂದಿಗೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
- ಅತೀ ವೇಗದ ಶತಕ: ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅತೀ ವೇಗದ ಶತಕ ಬಾರಿಸಿದ ವಿಶ್ವ ದಾಖಲೆ ವೈಭವ್ ಸೂರ್ಯವಂಶಿ ಪಾಲಾಗಿದೆ. ಕೇವಲ 55 ಎಸೆತಗಳಲ್ಲಿ ಸೆಂಚುರಿ ಪೂರೈಸಿ ಯುವ ದಾಂಡಿಗ ಈ ದಾಖಲೆ ನಿರ್ಮಿಸಿದ್ದಾರೆ.
- ಅತ್ಯಧಿಕ ಸ್ಕೋರ್: ಅಂಡರ್-19 ವಿಶ್ವಕಪ್ ಫೈನಲ್ ಮ್ಯಾಚ್ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆ ಕೂಡ ವೈಭವ್ ಪಾಲಾಗಿದೆ. ಈ ಪಂದ್ಯದಲ್ಲಿ 80 ಎಸೆತಗಳಲ್ಲಿ 175 ರನ್ ಬಾರಿಸಿ ವೈಭವ್ ಸೂರ್ಯವಂಶಿ ಈ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ.
- ಅತ್ಯಧಿಕ ಸಿಕ್ಸ್: ಅಂಡರ್-19 ವಿಶ್ವಕಪ್ ಪಂದ್ಯದ ಒಂದೇ ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ವಿಶ್ವ ದಾಖಲೆ ಕೂಡ ವೈಭವ್ ಸೂರ್ಯವಂಶಿ ಹೆಸರಿಗೆ ಸೇರ್ಪಡೆಯಾಗಿದೆ. ಈ ಪಂದ್ಯದಲ್ಲಿ ಬರೋಬ್ಬರಿ 15 ಸಿಕ್ಸರ್ ಸಿಡಿಸಿ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
- ಗರಿಷ್ಠ ಸ್ಕೋರ್: ಐಸಿಸಿ ಟೂರ್ನಿಯ ಅಂತಿಮ ಪಂದ್ಯದಲ್ಲಿ ಗರಿಷ್ಠ ಸ್ಕೋರ್ಗಳಿಸಿದ ವಿಶ್ವ ದಾಖಲೆ ಕೂಡ ವೈಭವ್ ಸೂರ್ಯವಂಶಿ ಪಾಲಾಗಿದೆ. ಫೈನಲ್ ಪಂದ್ಯದಲ್ಲಿ 175 ರನ್ ಸಿಡಿಸುವ ಮೂಲಕ ವೈಭವ್, ಆಸ್ಟ್ರೇಲಿಯಾ ಆಟಗಾರ್ತಿ ಅಲಿಸ್ಸಾ ಹೀಲಿ ಹೆಸರಿನಲ್ಲಿದ್ದ 170 ರನ್ಗಳ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
- 150 ಪ್ಲಸ್ ಸ್ಕೋರ್: ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ 150 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಹಿರಿಮೆಗೂ ವೈಭವ್ ಸೂರ್ಯವಂಶಿ ಪಾತ್ರರಾಗಿದ್ದಾರೆ.
- ಭರ್ಜರಿ ಬೌಂಡರಿ: ಐಸಿಸಿ ಫೈನಲ್ ಪಂದ್ಯದಲ್ಲಿ ಅತ್ಯಧಿಕ ಬೌಂಡರಿಗಳನ್ನು ಬಾರಿಸಿದ ವಿಶ್ವ ದಾಖಲೆ ಕೂಡ ವೈಭವ್ ಸೂರ್ಯವಂಶಿ ಪಾಲಾಗಿದೆ. ಈ ಪಂದ್ಯದಲ್ಲಿ ಯುವ ಎಡಗೈ ದಾಂಡಿಗ 15 ಫೋರ್ ಹಾಗೂ 15 ಸಿಕ್ಸರ್ಗಳನ್ನು ಸಿಡಿಸಿ ಈ ದಾಖಲೆ ನಿರ್ಮಿಸಿದ್ದಾರೆ.
- ಬೌಂಡಿಗಳಿಂದ ಗರಿಷ್ಠ ಸ್ಕೋರ್: ಐಸಿಸಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೇವಲ ಫೋರ್-ಸಿಕ್ಸ್ಗಳೊಂದಿಗೆ 150 ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಕೂಡ ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ.
- ಅತಿ ವೇಗದ 150 : ಐಸಿಸಿ ಟೂರ್ನಿಯಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 150 ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಕೂಡ ವೈಭವ್ ಪಾಲಾಗಿದೆ. ಈ ಪಂದ್ಯದಲ್ಲಿ ಕೇವಲ 71 ಎಸೆತಗಳಲ್ಲಿ ವೈಭವ್ 150 ರನ್ಗಳನ್ನು ಪೂರೈಸಿದ್ದರು.
- ಸಿಕ್ಸರ್ ಸರದಾರ: ಅಂಡರ್-19 ವಿಶ್ವಕಪ್ ಟೂರ್ನಿಯ ಆವೃತ್ತಿಯೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ವಿಶ್ವ ದಾಖಲೆಯನ್ನು ಕೂಡ ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ವೈಭವ್ ಈ ಬಾರಿ ಬರೋಬ್ಬರಿ 30 ಸಿಕ್ಸ್ ಸಿಡಿಸಿ ಅಬ್ಬರಿಸಿದ್ದಾರೆ.
- ಅತ್ಯಂತ ಕಿರಿಯ ಬ್ಯಾಟರ್: ಐಸಿಸಿ ಟೂರ್ನಿಯ ಫೈನಲ್ನಲ್ಲಿ ಶತಕ ಸಿಡಿಸಿದ, ಗರಿಷ್ಠ ರನ್ ಕಲೆಹಾಕಿದ, ಅತ್ಯಧಿಕ ಸಿಕ್ಸ್ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ವೈಭವ್ ಈ ಎಲ್ಲಾ ಸಾಧನೆ ಮಾಡಿರುವುದು 14ನೇ ವಯಸ್ಸಿನಲ್ಲಿ ಎಂಬುದು ವಿಶೇಷ.
ಇದನ್ನೂ ಓದಿ: RCB ತಂಡದ್ದು ಗೆಲುವಲ್ಲ, ವಿಶ್ವ ದಾಖಲೆಯ ‘ವಿಜಯ’
ಈ 10 ಭರ್ಜರಿ ದಾಖಲೆಯೊಂದಿಗೆ ವೈಭವ್ ಸೂರ್ಯವಂಶಿ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಪುಟವನ್ನು ತೆರೆದಿದ್ಟಾರೆ. ಇದೇ ಆರ್ಭಟ ಮುಂಬರುವ ಐಪಿಎಲ್ನಲ್ಲೂ ಮುಂದುವರೆದರೆ ವೈಭವ್ ಸೂರ್ಯವಂಶಿಗೆ ಟೀಮ್ ಇಂಡಿಯಾ ಬಾಗಿಲು ತೆರೆಯುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಶೀಘ್ರದಲ್ಲೇ ಯುವ ದಾಂಡಿಗನನ್ನು ಭಾರತ ತಂಡದಲ್ಲಿ ನೋಡಬಹುದು.