Rahul Gandhi
ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಕೇರಳದಲ್ಲಿ 5 ಗ್ಯಾರೆಂಟಿಗಳನ್ನು ಸೋಷಿಸಿದೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಅಧಿಕಾರಕ್ಕೆ ಬಂದರೆ ಉಚಿತ ಬಸ್ ಪ್ರಯಾಣ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಅಂದರೆ ಈ ಹಿಂದೆ ಕರ್ನಾಟಕದಲ್ಲಿ ಸಿದ್ಧರಾಮಯ್ಯ ಸರ್ಕಾರ ಜಾರಿ ಮಾಡಿದಂತೆ ಕೇರಳದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ ಹಲವು ಗ್ಯಾರೆಂಟಿಗಳನ್ನು ಜಾರಿಗೊಳಿಸುವುದಾಗಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟ ಹೇಳಿಕೊಂಡಿದೆ.
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ರೂಪಿಸಿರುವ 5 ಗ್ಯಾರೆಂಟಿ ಯೋಜನೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
- ಉಚಿತ ಬಸ್ ಪ್ರಯಾಣ: ರಾಜ್ಯದ ಎಲ್ಲಾ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ.
- ವಿದ್ಯಾರ್ಥಿನಿಯರಿಗೆ ಧನಸಹಾಯ: ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ₹1,000 ಆರ್ಥಿಕ ನೆರವು.
- ಹೆಚ್ಚುವರಿ ಕಲ್ಯಾಣ ಪೆನ್ಷನ್: ಸಮಾಜದ ಅಂಚಿನಲ್ಲಿರುವ ವರ್ಗದವರಿಗೆ ನೀಡಲಾಗುವ ಮಾಸಿಕ ಪೆನ್ಷನ್ ಮೊತ್ತವನ್ನು ₹3,000 ಕ್ಕೆ ಏರಿಕೆ ಮಾಡುವುದು.
- ಉಮ್ಮನ್ ಚಾಂಡಿ ಆರೋಗ್ಯ ವಿಮೆ: ಮಾಜಿ ಮುಖ್ಯಮಂತ್ರಿಗಳ ಹೆಸರಿನಲ್ಲಿ ಪ್ರತಿ ಕುಟುಂಬಕ್ಕೆ ₹25 ಲಕ್ಷ ವರೆಗಿನ ಉಚಿತ ಆರೋಗ್ಯ ವಿಮೆ ಒದಗಿಸುವುದು.
- ಯುವ ಉದ್ಯಮಿಗಳಿಗೆ ನೆರವು: ಹೊಸ ಉದ್ಯಮ ಆರಂಭಿಸಲು ಬಯಸುವ ಯುವಕ-ಯುವತಿಯರಿಗೆ ₹5 ಲಕ್ಷ ವರೆಗೆ ಬಡ್ಡಿ ರಹಿತ ಸಾಲ ನೀಡಿಕೆ.
ಇದರ ಜೊತೆಗೆ, ಹಿರಿಯ ನಾಗರಿಕರ ಸಮಸ್ಯೆಗಳನ್ನು ಆಲಿಸಲು ಪ್ರತ್ಯೇಕ ಇಲಾಖೆ ಅಥವಾ ಸಚಿವರನ್ನು ನೇಮಿಸುವುದಾಗಿಯೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಭರವಸೆ ನೀಡಿದೆ.
ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಮುಖ್ಯ ಗ್ಯಾರಂಟಿ ಯೋಜನೆಗಳು ಈ ಕೆಳಗಿನಂತಿವೆ:
- ಶಕ್ತಿ ಯೋಜನೆ: ರಾಜ್ಯದ ಎಲ್ಲಾ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC/BMTC) ಸಾಮಾನ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣ.
- ಗೃಹ ಜ್ಯೋತಿ: ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಸೌಲಭ್ಯ.
- ಗೃಹ ಲಕ್ಷ್ಮಿ: ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2,000 ನಗದು ಸಹಾಯಧನ.
- ಅನ್ನ ಭಾಗ್ಯ: ಬಿಪಿಎಲ್ (BPL) ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ ತಿಂಗಳಿಗೆ 10 ಕೆಜಿ ಅಕ್ಕಿ (ಪ್ರಸ್ತುತ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿಗೆ ಬದಲಾಗಿ ನಗದು ನೀಡಲಾಗುತ್ತಿದೆ).
- ಯುವ ನಿಧಿ: ಪದವಿ ಮುಗಿಸಿ ನಿರುದ್ಯೋಗಿಗಳಾಗಿರುವ ಯುವಕರಿಗೆ ಪ್ರತಿ ತಿಂಗಳು ₹3,000 ಮತ್ತು ಡಿಪ್ಲೊಮಾ ಪದವೀಧರರಿಗೆ ₹1,500 ನಿರುದ್ಯೋಗ ಭತ್ಯೆ (ಗರಿಷ್ಠ 2 ವರ್ಷಗಳವರೆಗೆ).
ಕರ್ನಾಟಕದಲ್ಲಿನ ಶಕ್ತಿ ಯೋಜನೆಯನ್ನು ಕೇರಳದಲ್ಲೂ ಪರಿಚಯಿಸಲು ಕಾಂಗ್ರೆಸ್ ಮೈತ್ರಿಕೂಟ ಮುಂದಾಗಿದೆ. ಇದಾಗ್ಯೂ ಗೃಹ ಜ್ಯೋತಿ ಯೋಜನೆಯ ಭರವಸೆ ನೀಡಲಾಗಿಲ್ಲ. ಬದಲಾಗಿ ಕೇರಳದಲ್ಲಿ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ₹1,000 ಆರ್ಥಿಕ ನೆರವು ನೀಡುವುದಾಗಿ ತಿಳಿಸಲಾಗಿದೆ.
ಇನ್ನು ಕರ್ನಾಟಕದ ಗೃಹಲಕ್ಷ್ಮಿ ಯೋಜನೆ ಬದಲಾಗಿ ಮಾಜಿ ಮುಖ್ಯಮಂತ್ರಿಗಳ ಹೆಸರಿನಲ್ಲಿ ಪ್ರತಿ ಕುಟುಂಬಕ್ಕೆ ₹25 ಲಕ್ಷ ವರೆಗಿನ ಉಚಿತ ಆರೋಗ್ಯ ವಿಮೆ ಒದಗಿಸಲಾಗುವುದು ಎಂದು ತಿಳಿಸಲಾಗಿದೆ.
ಹಾಗೆಯೇ ಅನ್ನ ಭಾಗ್ಯದ ಯೋಜನೆ ಬದಲಿಗೆ ಸಮಾಜದ ಅಂಚಿನಲ್ಲಿರುವ ವರ್ಗದವರಿಗೆ ನೀಡಲಾಗುವ ಮಾಸಿಕ ಪೆನ್ಷನ್ ಮೊತ್ತವನ್ನು ₹3,000 ಕ್ಕೆ ಏರಿಕೆ ಮಾಡುವುದಾಗಿ ಕೇರಳ ಕಾಂಗ್ರೆಸ್ ಭರವಸೆ ನೀಡಿದೆ.
ಇದನ್ನೂ ಓದಿ: ಕರ್ನಾಟಕದ್ದು ‘ಹಲಾಲ್’ ಬಜೆಟಾ? ಇಲ್ಲಿದೆ ನಿಜಾಂಶ
ಇನ್ನು ಕರ್ನಾಟಕದಲ್ಲಿ ಪರಿಚಯಿಸಲಾದ ಯುವ ನಿಧಿ ಬದಲಿಗೆ ಕೇರಳದಲ್ಲಿ ಹೊಸ ಉದ್ಯಮ ಆರಂಭಿಸಲು ಬಯಸುವ ಯುವಕ-ಯುವತಿಯರಿಗೆ ₹5 ಲಕ್ಷ ವರೆಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟ ಹೇಳಿಕೊಂಡಿದೆ.