‘Chaddy Gang’
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸರಣಿ ದರೋಡೆ ನಡೆಸಿ ಸಾರ್ವಜನಿಕರ ನಿದ್ದೆಗೆಡಿಸಿದ್ದ ಕುಖ್ಯಾತ ‘ಚಡ್ಡಿ ಗ್ಯಾಂಗ್’ (Chaddi Gang) ಇದೀಗ ರಾಜಧಾನಿ ಬೆಂಗಳೂರಿನ ಹೊಸ್ತಿಲಿಗೆ ಬಂದು ನಿಂತಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕುಂಬಾರನಹಳ್ಳಿಯಲ್ಲಿ ಈ ಗ್ಯಾಂಗ್ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಆನೇಕಲ್‌ನಲ್ಲಿ ದರೋಡೆಗೆ ಯತ್ನ!
ಶನಿವಾರ ತಡರಾತ್ರಿ ಆನೇಕಲ್ ತಾಲೂಕಿನ ಕುಂಬಾರನಹಳ್ಳಿಯ ‘ಸೆಲಬ್ರೆಟಿ ಎಕೋ ಫ್ರಂಟ್’ ಬಡಾವಣೆಗೆ ನುಗ್ಗಿದ ನಾಲ್ಕು ಜನರ ಈ ಚಡ್ಡಿ ಗ್ಯಾಂಗ್, ಸ್ಥಳೀಯ ನಿವಾಸಿಗಳಾದ ಚಂದ್ರಶೇಖರ್ ಮತ್ತು ರಾಮರೆಡ್ಡಿ ಎಂಬುವವರ ಮನೆಗಳಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕಿತ್ತು.
ಮುಖಕ್ಕೆ ಮಾಸ್ಕ್ ಧರಿಸಿ, ಕೇವಲ ಒಳ ಉಡುಪು (ಚಡ್ಡಿ) ಧರಿಸಿದ್ದ ಈ ಖದೀಮರು ಕಬ್ಬಿಣದ ರಾಡ್ ಹಾಗೂ ಕಟಿಂಗ್ ಟೂಲ್‌ಗಳನ್ನು ಕೈಯಲ್ಲಿ ಹಿಡಿದು ಸಂಚರಿಸುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಪಕ್ಕಾ ದಾಖಲಾಗಿದೆ.
ಮನೆಯ ಗೇಟ್ ಕಟ್ ಮಾಡಲು ಇಬ್ಬರು ಕದೀಮರು ಮುಂದಾದರೆ, ಇನ್ನುಳಿದ ಇಬ್ಬರು ರಸ್ತೆಯಲ್ಲಿ ನಿಂತು ನಿಗಾ ವಹಿಸುತ್ತಿದ್ದರು. ಕಾಂಪೌಂಡ್ ಗೋಡೆ ಹತ್ತಿ ಒಳನುಗ್ಗಲು ಯತ್ನಿಸುತ್ತಿದ್ದಂತೆ, ಮನೆಯಲ್ಲಿದ್ದ ಮಹಿಳೆಯೊಬ್ಬರ ಸಮಯಪ್ರಜ್ಞೆ ಮತ್ತು ಜಾಗರೂಕತೆಯಿಂದಾಗಿ ಈ ದರೋಡೆ ಯತ್ನ ವಿಫಲಗೊಂಡಿದೆ. ತಕ್ಷಣವೇ ಎಚ್ಚೆತ್ತ ನಿವಾಸಿಗಳು ಗಲಾಟೆ ಮಾಡುತ್ತಿದ್ದಂತೆ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಏನಿದು ಚಡ್ಡಿ ಗ್ಯಾಂಗ್?
ಈ ಗ್ಯಾಂಗ್ನವರು ಕಳ್ಳತನದ ವೇಳೆ ಕೇವಲ ಅಂಡರ್‌ವೇರ್ ಅಥವಾ ಚಡ್ಡಿಗಳನ್ನು ಮಾತ್ರ ಧರಿಸಿರುತ್ತಾರೆ. ಸಿಸಿಟಿವಿಯಲ್ಲಿ ಗುರುತು ಪತ್ತೆಯಾಗದಂತೆ ಮುಖಕ್ಕೆ ಮಾಸ್ಕ್ ಅಥವಾ ಬಟ್ಟೆ ಧರಿಸುತ್ತಾರೆ.
ಅಷ್ಟೇ ಅಲ್ಲದೆ ಇವರನ್ನು ಹಿಡಿಯಲು ಹೋದರೆ ಕೈಗೆ ಸಿಗದೇ ಜಾರಿಕೊಳ್ಳಲೆಂದು ಇಡೀ ದೇಹಕ್ಕೆ ಆಯಿಲ್ ಅಥವಾ ಗ್ರೀಸ್ ಬಳಿದುಕೊಂಡಿರುತ್ತಾರೆ.
ಇನ್ನು ಕೈಯಲ್ಲಿ ಕಾಂಪೌಂಡ್ ಗ್ರಿಲ್ ಮುರಿಯಲು ಕಬ್ಬಿಣದ ರಾಡ್, ಕಟಿಂಗ್ ಪ್ಲೇಯರ್ಸ್‌ಗಳ ಜೊತೆಗೆ ಹಲ್ಲೆ ನಡೆಸಲು ಮಾರಕಾಸ್ತ್ರಗಳನ್ನು ಇಟ್ಟುಕೊಂಡಿರುತ್ತಾರೆ. ಯಾರಾದರೂ ಅಡ್ಡಿಪಡಿಸಿದರೆ ಪ್ರಾಣ ತೆಗೆಯಲು ಸಹ ಇವರು ಹಿಂಜರಿಯುವುದಿಲ್ಲ.
ಪೊಲೀಸರು ಟ್ರ್ಯಾಕ್ ಮಾಡುತ್ತಾರೆ ಎಂಬ ಭೀತಿ ಹಿನ್ನಲೆಯಲ್ಲಿ, ಈ ಗ್ಯಾಂಗ್ನ ಯಾವುದೇ ಸದಸ್ಯರು ಕಳ್ಳತನದ ವೇಳೆ ವೇಳೆ ಮೊಬೈಲ್ ಫೋನ್‌ಗಳನ್ನು ಬಳಸುವುದೇ ಇಲ್ಲ.
ಜಿಗಣಿ ಪೊಲೀಸರಿಂದ ತನಿಖೆ ಚುರುಕು!
ವಿಷಯ ತಿಳಿಯುತ್ತಿದ್ದಂತೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ತೀವ್ರಗೊಳಿಸಿದ್ದಾರೆ. ಸಾರ್ವಜನಿಕರು ರಾತ್ರಿ ವೇಳೆ ಎಚ್ಚರಿಕೆಯಿಂದ ಇರುವಂತೆ ಹಾಗೂ ಅಪರಿಚಿತರು ಕಂಡರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.