Tarun Kumar
ದೆಹಲಿಯ ಉತ್ತಮ್ ನಗರದ ಹಸ್ತಲ್ ಜೆಜೆ ಕಾಲೋನಿಯಲ್ಲಿ ನಡೆದ 26 ವರ್ಷದ ತರುಣ್ ಕುಮಾರ್ (Tarun Kumar Murder) ಕೊಲೆ ಪ್ರಕರಣದಲ್ಲಿ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಶಂಕಿತರಲ್ಲಿ ಒಬ್ಬ ಅಪ್ರಾಪ್ತ ವಯಸ್ಕನೂ ಸೇರಿದ್ದಾನೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಸಿಎಂ ರೇಖಾ ಗುಪ್ತಾ ಸೂಚಿಸಿದ್ದಾರೆ.
ಘಟನೆಯ ಹಿನ್ನೆಲೆ
ಮಾರ್ಚ್ 4 ರಂದು ಹೋಳಿ ಹಬ್ಬದ ಸಂಭ್ರಮದಲ್ಲಿದ್ದಾಗ ತರುಣ್ ಕುಟುಂಬದ 11 ವರ್ಷದ ಬಾಲಕಿ ಎಸೆದ ನೀರಿನ ಬಲೂನ್ ಆಕಸ್ಮಿಕವಾಗಿ ನೆರೆಮನೆಯ ಮುಸ್ಲಿಂ ಮಹಿಳೆಯೊಬ್ಬರಿಗೆ ತಗುಲಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಹಿಳೆ ಹಾಗೂ ಕುಟುಂಬಸ್ಥರು ಜಗಳಕ್ಕಿಳಿದಿದ್ದರು.
ಈ ಸಂಬಂಧ ತರುಣ್ ಕುಟುಂಬದವರು ಕ್ಷಮೆಯಾಚಿಸಿದರೂ, ನೆರೆಮನೆಯವರು ಗಲಾಟೆ ನಡೆಸಿದ್ದರು. ಈ ಎರಡೂ ಕುಟುಂಬಗಳು ಸುಮಾರು 50 ವರ್ಷಗಳಿಂದ ನೆರೆಹೊರೆಯವರಾಗಿದ್ದರೂ ಸಣ್ಣಪುಟ್ಟ ವಿಷಯಗಳಿಗೆ ಈ ಹಿಂದೆ ಮನಸ್ತಾಪ ಹೊಂದಿದ್ದರು ಎನ್ನಲಾಗಿದೆ. ಹೀಗಾಗಿ ಸಣ್ಣ ವಿಷಯವು ಅಲ್ಲಿಗೆ ಮುಗಿದಿರಲಿಲ್ಲ.
ದಾರುಣ ದಾಳಿ
ಅಂದು ರಾತ್ರಿ ಸುಮಾರು 10:30ಕ್ಕೆ 26 ವರ್ಷದ ತರುಣ್ ಕುಮಾರ್ (ಡಿಜಿಟಲ್ ಮಾರ್ಕೆಟಿಂಗ್ ವಿದ್ಯಾರ್ಥಿ) ತನ್ನ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದಾಗ, 8 ರಿಂದ 20 ಜನರ ಗುಂಪು ಆತನನ್ನು ಅಡ್ಡಗಟ್ಟಿದ್ದಾರೆ.
ಇತ್ತ ಮನೆಯ ಹೊರಗಿನ ಜಗಳದ ಬಗ್ಗೆ ತಿಳಿಯದ ತರುಣ್ ಮೇಲೆ ಗುಂಪು ಕಬ್ಬಿಣದ ಸಳುಗಳು, ಇಟ್ಟಿಗೆ ಮತ್ತು ಕಲ್ಲುಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಈ ವೇಳೆ ಆತನ ಎದೆಯ ಮೇಲೆ ದೊಡ್ಡ ಕಲ್ಲನ್ನು ಎತ್ತಿ ಹಾಕಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ತರುಣ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾರ್ಚ್ 5 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪೊಲೀಸ್ ಕ್ರಮ ಮತ್ತು ತನಿಖೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಓರ್ವ ಅಪ್ರಾಪ್ತ ಸೇರಿ ಈವರೆಗೆ 8 ಜನರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನಿಜಾಮುದ್ದೀನ್, ಅವರ ಮಗ ಉಮರ್ದಿನ್, ಜುಮ್ಮದೀನ್, ಕಮರುದ್ದೀನ್ ಹಾಗೂ ಉಮರುದ್ದೀನ್ ಅವರ ಮಗ ಮುಜಾಫರ್, ಮುಸ್ತಾಕ್ ಮತ್ತು ತಾಹಿರ್ ಎಂದು ಗುರುತಿಸಲಾಗಿದೆ.
ಬುಲ್ಡೋಝರ್ ಕ್ರಮ
ಮಾರ್ಚ್ 8 ರಂದು, ಈ ಪ್ರಕರಣದ ಆರೋಪಿಗಳ ಮನೆಗಳಲ್ಲಿದ್ದ ಅನಧಿಕೃತ ಕಟ್ಟಡಗಳನ್ನು ಅಧಿಕಾರಿಗಳು ಬುಲ್ಡೋಝರ್ ಮೂಲಕ ಧ್ವಂಸಗೊಳಿಸಿದ್ದಾರೆ.
ಸಾರ್ವಜನಿಕ ಆಕ್ರೋಶ
ತರುಣ್ ಸಾವಿನ ನಂತರ ಉತ್ತಮ್ ನಗರ ಮೆಟ್ರೋ ನಿಲ್ದಾಣದ ಬಳಿ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದವು. ಸ್ಥಳೀಯರು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಪ್ರಕರಣದ ತನಿಖೆಯನ್ನು ಸಿಬಿಐಗೆ (CBI) ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಇತ್ತ ಉತ್ತಮ್ ನಗರದ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು ರಾಪಿಡ್ ಆಕ್ಷನ್ ಫೋರ್ಸ್ (RAF) ಸೇರಿದಂತೆ ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.